ADVERTISEMENT

ಅಂಬೇಡ್ಕರ್ ಭವನ ಕಾಮಗಾರಿ ಶೀಘ್ರ ಪೂರ್ಣ

ಸಂಧ್ಯಾ ಹೆಗಡೆ
Published 15 ಮೇ 2017, 7:00 IST
Last Updated 15 ಮೇ 2017, 7:00 IST

ಶಿರಸಿ: ನಗರದ ಯಲ್ಲಾಪುರ ರಸ್ತೆಯಲ್ಲಿ ಟಿ.ಎಸ್‌.ಎಸ್ ಪೆಟ್ರೋಲ್ ಬಂಕ್ ಎದುರು ತಲೆ ಎತ್ತಿರುವ ಅಂಬೇಡ್ಕರ್ ಭವನ ಕಟ್ಟಡದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಮೊದಲ ಸುಸಜ್ಜಿತ ಬೃಹತ್ ಅಂಬೇಡ್ಕರ್ ಭವನವಾಗಲಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಿರಸಿಯಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನೆಯ ಕ್ರೋಢೀಕೃತ ಅನುದಾನದಲ್ಲಿ ₹ 1ಕೋಟಿ ಮಂಜೂ ರು ಆಗಿತ್ತು. 2012–13ನೇ ಸಾಲಿನಲ್ಲಿ ಮಂಜೂರು ಆಗಿದ್ದ ಕಾಮಗಾರಿ 2013ರ ನವೆಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಂತ ರವಿದಾಸ ಕೋ ಆಪರೇಟಿವ್ ಸೊಸೈಟಿಯು ಶಿರಸಿ–ಯಲ್ಲಾಪುರ ಮುಖ್ಯ ರಸ್ತೆಯ ಪಕ್ಕದಲ್ಲಿ ನೀಡಿದ್ದ ನಿವೇಶನದಲ್ಲಿ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು.

‘ಆಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಸಭಾಭವನ ನಿರ್ಮಿಸುವ ಉದ್ದೇಶ ದಿಂದ ಹೆಚ್ಚುವರಿಯಾಗಿ ಸಲ್ಲಿಸಿದ್ದ ₹ 2 ಕೋಟಿ ಪ್ರಸ್ತಾವ ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನದಿಂದ ಮಂಜೂರು ಆಗಿದೆ. ಇದೇ ಮೊತ್ತದಲ್ಲಿ ಕಾಮಗಾರಿ ನಡೆಯುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಲ್ಲಾಬಕ್ಷ್ ಹೇಳಿದರು.

ADVERTISEMENT

‘ನೆಲ ಮಹಡಿಯ ಹಾಲ್‌ನಲ್ಲಿ ಏಕಕಾಲದಲ್ಲಿ ಒಂದು ಸಾವಿರು ಜನರು ಕುಳಿತು ಊಟ ಮಾಡಬಹುದು. ಮೊದಲ ಮಹಡಿಯ ಸಭಾಭವನಕ್ಕೆ ನೆಲಹಾಸು ಹಾಕುವ ಕಾಮಗಾರಿ ನಡೆ ಯುತ್ತಿದೆ. ಇನ್ನು ಪೇಂಟಿಂಗ್, ಆವರಣ ಗೋಡೆ ನಿರ್ಮಾಣದ ಕೆಲಸ ಮಾತ್ರ ಬಾಕಿ ಉಳಿದಿದೆ’ ಎಂದು  ಹೇಳಿದರು.

ಒಂದೂವರೆ ವರ್ಷದ ಹಿಂದೆ ಅಂಬೇಡ್ಕರ್ ಭವನದ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕಾಮಗಾರಿಯ ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಮೇಲಿನ ಆರೋಪದ ತನಿಖೆ ನಡೆಯುತ್ತಿದ್ದ ಕಾರಣ ಆರಂಭದ 7–8 ತಿಂಗಳು ಕಾಮಗಾರಿ ಸಂಪೂರ್ಣ ಸ್ಥಗಿತಗೊಂ ಡಿತ್ತು. ನಂತರ ಮರಳಿನ ಸಮಸ್ಯೆಯಿಂದ ಒಂದು ತಿಂಗಳು ಕೆಲಸ ನಿಲ್ಲಿಸಲಾಗಿತ್ತು. ಈಗ ಕೆಲಸ ತ್ವರಿತವಾಗಿ ನಡೆಯುತ್ತಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಿರ್ಮಿತಿ ಕೇಂದ್ರ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತ ರಿಸಿದ ನಂತರದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯ ಸಮಿತಿ ಭವನದ ನಿರ್ವಹಣೆ ನೋಡಿಕೊಳ್ಳುತ್ತದೆ. ಬಾಡಿಗೆ ದರ ಸಹ ಇದೇ ಸಮಿತಿಯಲ್ಲಿ ನಿರ್ಧಾರವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.