ADVERTISEMENT

ಅಕ್ರಮ ಮದ್ಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 8:33 IST
Last Updated 9 ನವೆಂಬರ್ 2017, 8:33 IST

ಸಿದ್ದಾಪುರ : ‘ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕು’ ಎಂದು ಆಗ್ರಹಿಸಿ, ಸ್ತ್ರೀಶಕ್ತಿ, ಸ್ವಸಹಾಯ, ಯುವಕ ಸಂಘದ ಸದಸ್ಯರು ಮತ್ತು ಸಾರ್ವಜನಿಕರು ತಾಲ್ಲೂಕಿನ ಬೇಡ್ಕಣಿಯಲ್ಲಿಬುಧವಾರ ಮೆರವಣಿಗೆ ನಡೆಸಿದರು. ಸ್ಥಳೀಯ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಂಗಾರಪ್ಪ, ಪಿಐ ಜಯಂತ್ ಎಂ. ಮತ್ತು ಅಬಕಾರಿ ಇನ್‌ಸ್ಪೆಕ್ಟರ್ ಡಿ.ಎನ್‌. ಶಿರ್ಸಿಕರ್ ಅವರಿಗೆ ಪ್ರತಿಭಟನೆಕಾರರು ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜ ನಾಯ್ಕ ಮಾತನಾಡಿ, ‘ ಸಂಬಂಧಿಸಿದ ಇಲಾಖೆಯವರು ಮಹಿಳೆಯರ ಅಳಲನ್ನು ಅರ್ಥ ಮಾಡಿಕೊಳ್ಳಬೇಕು. ಮದ್ಯದ ಕಾರಣದಿಂದ ಯುವ ಜನಾಂಗ ಸಮಾಜಕ್ಕೆ ಮಾರಕವಾಗುತ್ತಿದೆ’ ಎಂದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಉಮೇಶ ನಾಯ್ಕ ಮಾತನಾಡಿ, ‘ಕಳ್ಳಬಟ್ಟಿ ಮಾರಾಟ ನಿಷೇಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಕೊಟ್ಟೆ ಸಾರಾಯಿ ನಿಗ್ರಹಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

ಸಮೃದ್ಧಿ ಗೊಂಚಲು ಸಂಘದ ಉಪಾಧ್ಯಕ್ಷೆ ವೇದಾ ಈರಪ್ಪ ನಾಯ್ಕ, ‘ಬಡವರ ಮತ್ತು ಮಹಿಳೆಯರ ಹಣ ಈ ಮೂಲಕ ಸರ್ಕಾರಕ್ಕೆ ಸಂದಾಯ ಆಗಕೂಡದು. ಎಲ್ಲರೂ ನೆಮ್ಮದಿಯ ಜೀವನ ನಡೆಸಲು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು’ ಎಂದರು.

ADVERTISEMENT

ಗ್ರಾಮ ಪಂಚಾಯ್ತಿ ಸದಸ್ಯೆ ಶಾಂತಲಾ ನಾಯ್ಕ, ಸ್ವಸಹಾಯ ಸಂಘದ ಪದ್ಮಾವತಿ ನಾಯ್ಕ, ಗ್ರಾಮಸ್ಥರ ಪರವಾಗಿ ಮಹಾಬಲೇಶ್ವರ ನಾಯ್ಕ ಮಾತನಾಡಿದರು. ಸಮೃದ್ಧಿ ಗೊಂಚಲು ಸಂಘದ ಅಧ್ಯಕ್ಷೆ ಪೂರ್ಣಿಮಾ ನಾಯ್ಕ ಮನವಿ ವಾಚಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸವಿತಾ ನಾಯ್ಕ, ಸದಸ್ಯರಾದ ಶಿವಕುಮಾರ ಗೌಡ, ಈರಪ್ಪ ನಾಯ್ಕ, ಹನುಮಂತ ನಾಯ್ಕ, ಪದ್ಮಪ್ರಿಯಾ ನಾಯ್ಕ, ಪಾರ್ವತಿ ಚೆನ್ನಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.