ADVERTISEMENT

ಅಕ್ಷರದ ಹಬ್ಬದಲ್ಲಿ ಕಬ್ಬಿಗರ ಕಾವ್ಯ

ರಂಗೋಲಿಯಲ್ಲಿ ಅರಳಿದ ಕಲೆ; ಚಿತ್ರದ ಮೂಲಕ ಪಾಠ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 6:51 IST
Last Updated 6 ಫೆಬ್ರುವರಿ 2017, 6:51 IST

ಶಿರಸಿ: ರಾಷ್ಟ್ರೀಯ ಆವಿಷ್ಕಾರ ಪ್ರದರ್ಶನ, ಭಾಷಾ ಬೋಧನೆ, ನಲಿಕಲಿ ಮೇಳ, ವಿಜ್ಞಾನ ಮೇಳ, ಮೆಟ್ರಿಕ್ ಮೇಳ, ಸಮಾಜ ವಿಜ್ಞಾನ ಮೇಳ, ಶಿಕ್ಷಕರ ಪ್ರತಿಭಾ ಪ್ರದರ್ಶನದೊಂದಿಗೆ ಶೈಕ್ಷಣಿಕ ಜಿಲ್ಲೆಯ ಶೈಕ್ಷಣಿಕ ಹಬ್ಬ ಶನಿವಾರ ಇಲ್ಲಿ ಸಡಗರದಿಂದ ಜರುಗಿತು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಶೈಕ್ಷಣಿಕ ಹಬ್ಬಕ್ಕೆ ಚಾಲನೆ ನೀಡಿದರು. ಶಿಕ್ಷಣ ಇಲಾಖೆ ನಿಂತ ನೀರಾಗದೆ ಸದಾ ಚಲನೆಯಲ್ಲಿರುವ ಪ್ರವಾಹದಂತೆ ಇರಬೇಕು. ಕ್ರಿಯಾಶೀಲ ಚಟುವಟಿಕೆ ಹಮ್ಮಿಕೊಂಡು ಸಮಾಜಮುಖಿಯಾಗಿ ಶಿಕ್ಷಣ ಇಲಾಖೆ ಸಾಗಬೇಕು. ಸೌಹಾರ್ದಯುತ ಸ್ಪರ್ಧೆ ಎಲ್ಲ ಕ್ಷೇತ್ರಗಳಲ್ಲಿ ಬೆಳೆಯಬೇಕು. ಹೊಸ ಆವಿಷ್ಕಾರ ಮತ್ತು ಚಟುವಟಿಕೆಯಿಂದ ಮಕ್ಕಳು ಮತ್ತು ಶಿಕ್ಷಕರ ಜ್ಞಾನ ಮಟ್ಟ ವೃದ್ಧಿಸಲು ಸಾಧ್ಯ ಎಂದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ ಶಿಕ್ಷಕರು ಮಕ್ಕಳ ಮೇಲೆ ತೀವ್ರ ಪ್ರಭಾವ ಬೀರುವ ವ್ಯಕ್ತಿಗಳಾಗಿದ್ದಾರೆ. ಪಾಠದ ಶೈಲಿ, ಕಲಿಕಾ ವಿಧಾನ, ಆಚಾರ– ವಿಚಾರ ತಿಳಿಸುವ ಕೆಲಸ ಶಿಕ್ಷಕರಿಂದ ಸರಿಯಾಗಿ ಆದರೆ ಭವಿಷ್ಯದಲ್ಲಿ ಮಕ್ಕಳು ಉತ್ತಮ ನಾಗರಿಕರಾಗಿ ರೂಪುಗೊಳ್ಳುತ್ತಾರೆ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಲ್‌.ಟಿ. ಪಾಟೀಲ್, ಬಸವರಾಜ ದೊಡ್ಮನಿ, ಪ್ರಭಾವತಿ ಗೌಡ, ರೂಪಾ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಾಧವ ರೇವಣಕರ, ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ, ತಹಶೀಲ್ದಾರ್ ಬಸಪ್ಪ ಪೂಜಾರಿ, ಬಿಇಒ ಬಿ.ವಿ. ನಾಯ್ಕ, ಶಿಕ್ಷಕರ ಸಂಘದ ಪ್ರಮುಖರಾದ ನಾರಾಯಣ ನಾಯ್ಕ, ದಿನೇಶ ನಾಯ್ಕ, ಬಾಲಚಂದ್ರ, ಪ್ರಶಾಂತ ಹೆಗಡೆ ಇದ್ದರು. ಡಿಡಿಪಿಐ ಎಂ.ಎಸ್. ಪ್ರಸನ್ನಕುಮಾರ ಸ್ವಾಗತಿಸಿದರು.

ಮಕ್ಕಳ ಪ್ರಶ್ನೆಗೆ ತಬ್ಬಿಬ್ಬು: ಶೈಕ್ಷಣಿಕ ಜಿಲ್ಲೆಯ ಶಿಕ್ಷಕರು ಹಬ್ಬದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿ ತಾವು ಸಿದ್ಧಪಡಿಸಿದ ಕ್ರಿಯಾಶೀಲ ಮಾದರಿಗಳನ್ನು ಪ್ರದರ್ಶಿಸಿದರು. ಕೊಠಡಿ ತುಂಬ ವೈವಿಧ್ಯಮಯ ಚಿತ್ರಗಳನ್ನು ಅಂಟಿಸಿ ‘ಚಿತ್ರದೊಂದಿಗೆ ಚಿತ್ತದಿ ಮಾತನಾಡಿ’ ಚಿತ್ರ ಕೊಠಡಿ ಗಮನ ಸೆಳೆಯಿತು.

ಮೆಟ್ರಿಕ್ ಮೇಳದಲ್ಲಿ ದ್ರವಗಳ ಅಳತೆ ಮತ್ತು ಪರಿಚಯ, ಕಾಲದ ಅಳತೆ, ತೂಕದ ಆದರ್ಶ ಮಾನಗಳು, ಮೀಟರ್ ಅಳತೆ ಸೇರಿದಂತೆ ವಿವಿಧ ಅಳತೆಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದರು.

ಅಧಿಕಾರಿಗಳ ಜೊತೆ ಸಂವಾದದಲ್ಲಿ ಮಕ್ಕಳಿಂದ ತೂರಿಬಂದ ಪ್ರಶ್ನೆಗಳಿಗೆ ಅಧಿಕಾರಿಗಳು ತಬ್ಬಿಬ್ಬಾದರು. ‘ಜೊಯಿಡಾದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸುವುದು ಯಾವಾಗ ? ನೀವು ಇದಕ್ಕೆ ಸರಿಯಾದ ಉತ್ತರ ನೀಡುವ ತನಕ ನಾನು ಹೋಗುವುದಿಲ್ಲ’ ಎಂದು ವಿದ್ಯಾರ್ಥಿ ಹೇಳಿದ ಪರಿ ನೋಡಗರು ಮೂಗಿನ ಮೇಲೆ ಬೆರಳಿಡುವಂತಿತ್ತು.

ಶಿಕ್ಷಕರಿಂದ ಕವನ ವಾಚನ, ಗಾಯನ ಮತ್ತು ಚಿತ್ರ ಬಿಡಿಸುವ ಗೋಷ್ಠಿ, ತರಗತಿ ಬೋಧನೆಯ ವಿಷಯಗಳನ್ನು ಬೊಂಬೆಗಳ ನೃತ್ಯ, ಕಥೆ, ಸಂಗೀತಗಳೊಂದಿಗೆ ಶಿಕ್ಷಕರು ಪ್ರದರ್ಶನ ನೀಡಿದರು. ಗೀತ ಗಾಯನ, ಜಾನಪದ ನೃತ್ಯ, ನೃತ್ಯ ರೂಪಕ, ಯಕ್ಷಗಾನ ಪ್ರದರ್ಶನ ಶಿಕ್ಷಕರ ಪ್ರತಿಭೆಯನ್ನು ಸಾಕ್ಷೀಕರಿಸಿತು.

*
ಶಿಕ್ಷಕರು ವಿದ್ಯಾರ್ಥಿಗಳ ಪಾಲಿನ ಶಿಲ್ಪಿಗಳಾಗಿದ್ದಾರೆ. ಮಕ್ಕಳ ವ್ಯಕ್ತಿತ್ವ ನಿರ್ಮಾತೃರೇ ಶಿಕ್ಷಕರು. ಈ ಅರಿವು ಶಿಕ್ಷಕರಲ್ಲಿ ಸದಾ ಇರಬೇಕು.  ಮಕ್ಕಳ ಭವಿಷ್ಯ ಉಜ್ವಲವಾಗಲಿದೆ.
-ಎಸ್‌.ಎಸ್.ನಕುಲ್,
ಜಿಲ್ಲಾಧಿಕಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.