ADVERTISEMENT

ಅತಿಕ್ರಮಣ ತೆರವು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 10:56 IST
Last Updated 16 ಏಪ್ರಿಲ್ 2017, 10:56 IST

ಕಾರವಾರ:  ಮುಂಡಗೋಡ ತಾಲ್ಲೂಕಿನ ಚಿಗಳ್ಳಿ ಗ್ರಾಮದಲ್ಲಿ ಕೆರೆಯ ಅತಿಕ್ರಮಣವನ್ನು ಗುರುವಾರ ಜೆಸಿಬಿ ಮೂಲಕ ತೆರವುಗೊಳಿಲಾಯಿತು.‘ಸರ್ವೆ ನಂಬರ್ 66ರಲ್ಲಿ 2.17 ಎಕರೆ ವ್ಯಾಪ್ತಿಯ ಸರ್ಕಾರಿ ಕೆರೆಯಲ್ಲಿ 37 ಗುಂಟೆಯಷ್ಟು ಭೂಮಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದರು. ಅದನ್ನು ತೆರವುಗೊಳಿಸಿ ಸುತ್ತಲೂ ಕಂದಕ ಮಾಡಿ ಭದ್ರಪಡಿಸಲಾಗಿದೆ’ ಎಂದು ತಹಶೀಲ್ದಾರ್ ಅಶೋಕ ಗುರಾಣಿ ತಿಳಿಸಿದರು.

‘ತಾಲ್ಲೂಕಿನಲ್ಲಿ ಒಟ್ಟು 331 ಸರ್ಕಾರಿ ಕೆರೆಗಳನ್ನು ಗುರುತಿಸಲಾಗಿದ್ದು, ಮೋಜಣಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇದುವರೆಗೆ 30 ಕೆರೆಗಳ ಮೋಜಣಿ ಕಾರ್ಯ ಪೂರ್ಣಗೊಂಡಿದ್ದು, ಕೆಲವು ಕೆರೆಗಳಲ್ಲಿ ಒತ್ತುವರಿಯನ್ನು ಗುರುತಿಸಲಾಗಿದೆ. ಅತಿ ಹೆಚ್ಚಿನ ಒತ್ತುವರಿ ಚಿಗಳ್ಳಿ ಕೆರೆಯಲ್ಲಿ ಕಂಡು ಬಂದಿದ್ದು, ಆರಂಭದಲ್ಲಿ ಅದನ್ನು ತೆರವುಗೊಳಿಸಲಾಗಿದೆ. ಈ ತಿಂಗಳ ಅಂತ್ಯದ ಒಳಗಾಗಿ ಎಲ್ಲಾ ಸರ್ಕಾರಿ ಕೆರೆಗಳ ಮೋಜಣಿ ಕಾರ್ಯವನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದು, ಇದರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

‘ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಹಾಗೂ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಚಿಗಳ್ಳಿ ಕೆರೆಯ ಹೂಳೆತ್ತಿ ಅಭಿವೃದ್ಧಿಪ­ಡಿಸುವಂತೆ ಗ್ರಾಮ ಪಂಚಾಯ್ತಿಗೆ ಸೂಚನೆ ನೀಡಲಾಗಿದೆ. ಇದೇ ರೀತಿಯಲ್ಲಿ ತಾಲ್ಲೂಕಿನಲ್ಲಿರುವ ಎಲ್ಲ ಕೆರೆಗಳ ಹೂಳೆತ್ತಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.ಜಿಲ್ಲೆಯಲ್ಲಿ ಗುರುತಿಸಲಾಗಿರುವ ಎಲ್ಲ ಸರ್ಕಾರಿ ಕೆರೆಗಳ ಮೋಜಣಿ ಕಾರ್ಯ ನಡೆಸಿ ನಕ್ಷೆ ಸಿದ್ಧಪಡಿಸಿ, ಅತಿಕ್ರಮಣ­ವಾಗಿದ್ದರೆ ತೆರವುಗೊಳಿ­ಸುವಂತೆ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಎಲ್ಲ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು 2,082 ಸರ್ಕಾರಿ ಕೆರೆಗಳನ್ನು ಗುರುತಿಸಲಾಗಿದ್ದು, ಸುಮಾರು 5,316 ಎಕರೆ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿವೆ. ಇವುಗಳ ಪೈಕಿ ಒಂದು ಎಕರೆಗೂ ಅಧಿಕ ವಿಸ್ತೀರ್ಣದ 986 ಕೆರೆಗಳಿದ್ದು, 5,015 ಎಕರೆ ವ್ಯಾಪ್ತಿಯಲ್ಲಿವೆ. ಇವುಗಳಿಗೆ ಮೋಜಣಿ ಮಾಡಿಸಿ ನಕ್ಷೆ ತಯಾರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.