ADVERTISEMENT

ಅಪಾಯಕಾರಿ ತಿರುವು: ಪ್ರಯಾಣಿಕರಲ್ಲಿ ಆತಂಕ

ಲಂಡನ್‌ ಸೇತುವೆ ಬಳಿ ದುಃಸ್ಥಿತಿಯಲ್ಲಿರುವ ತಡೆಗೋಡೆ; ನೆಲಕ್ಕುರುಳಿದ ಸೂಚನಾ ಫಲಕ: ಸುರಕ್ಷತಾ ಕ್ರಮವಿಲ್ಲ

ಪಿ.ಕೆ.ರವಿಕುಮಾರ
Published 24 ಜುಲೈ 2017, 8:56 IST
Last Updated 24 ಜುಲೈ 2017, 8:56 IST
ಕಾರವಾರದ ಲಂಡನ್‌ ಸೇತುವೆ ಬಳಿಯ ತಿರುವಿನಲ್ಲಿ ಹಾಳಾಗಿರುವ ತಡೆಗೋಡೆ.
ಕಾರವಾರದ ಲಂಡನ್‌ ಸೇತುವೆ ಬಳಿಯ ತಿರುವಿನಲ್ಲಿ ಹಾಳಾಗಿರುವ ತಡೆಗೋಡೆ.   

ಕಾರವಾರ: ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಒಂದೆರಡು ಕಡೆ ಅಪಾಯ ತಿರುವುಗಳಿದ್ದು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ನಿಶ್ಚಿತ. ಹೀಗಾಗಿ ಈ ಭಾಗದಲ್ಲಿ ಸೂಚನಾ ಫಲಕಗಳನ್ನು ಅಳವಡಿಸ ಬೇಕು ಎಂಬುದು ಸಾರ್ವಜನಿಕರ ಕೂಗು ಆಗಿದೆ.

ಗೋವಾಕ್ಕೆ ತೆರಳುವ ಎಲ್ಲ ವಾಹನ­ಗಳು ಇಲ್ಲಿನ ಲಂಡನ್‌ ಸೇತುವೆಯನ್ನೇ ಹಾದು ಹೋಗುತ್ತವೆ. ಪ್ರವಾಸಿ ವಾಹನ­ಗಳು ಹಾಗೂ ಇಂಧನ ಹೊತ್ತ ಟ್ಯಾಂಕರ್‌­ಗಳ ಸಂಚಾರ ಇಲ್ಲಿ ಅಧಿಕ­ವಾಗಿವೆ. ಈ ಸೇತುವೆ ಬಳಿಯ ತಿರುವಿ­ನಲ್ಲಿ ಆಗಾಗ ಅಪಘಾತಗಳು ಸಂಭವಿ­ಸುತ್ತಿದ್ದರೂ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.

ನಗರದ ಕೊಳಚೆ ನೀರು ಈ ಸೇತುವೆ ಕೆಳಭಾಗದಲ್ಲಿ ಹರಿದು ಸಮುದ್ರ ಸೇರುತ್ತದೆ. ಸಮುದ್ರ ಉಬ್ಬರ­ವಿರುವ ಸಂದರ್ಭದಲ್ಲಿ ನಾಲ್ಕೈದು ಅಡಿ ನೀರು ಇಲ್ಲಿ ನಿಂತಿರುತ್ತದೆ. ವಾಹನ ಸವಾರರ ಸುರಕ್ಷತಾ ದೃಷ್ಟಿಯಿಂದ ಸೇತು­ವೆಯ ತಿರುವಿನಲ್ಲಿ 12 ಅಡಿ ಉದ್ದದ ತಡೆಗೋಡೆ ಕೆಲ ವರ್ಷಗಳ ಹಿಂದೆ ಹಾಕಲಾಗಿದೆ. ಆದರೆ ಭಾರಿ ವಾಹನ ಡಿಕ್ಕಿ ಹೊಡೆದ ಕಾರಣ ಅದು ದುಃಸ್ಥಿತಿಯಿಂದ ಕೂಡಿದೆ. ಅದರ ಕಲ್ಲುಗಳು ಕಿತ್ತು ಹೋಗಿವೆ.

ADVERTISEMENT

ತಿರುವಿನಲ್ಲಿ ಅಳವಡಿಸಿದ್ದ ಸೂಚನಾ ಫಲಕವು ನೆಲಕ್ಕುರುಳಿ ಅನೇಕ ತಿಂಗಳುಗಳೇ ಕಳೆದಿವೆ. ಆದರೆ ಅದನ್ನು ಪೊಲೀಸ್‌ ಇಲಾಖೆಯಾಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ­ಗಳಾಗಲಿ ಸರಿಪಡಿಸುವ ಗೋಜಿಗೆ ಹೋಗಿಲ್ಲ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಕಾಳಿ ಸೇತುವೆ ಬಳಿ ಹೆದ್ದಾರಿ ಸ್ವಲ್ಪ ಎತ್ತರವಾಗಿದೆ. ಇದರಿಂದ ಹೆದ್ದಾರಿ­ಯನ್ನು ಸಂಪರ್ಕಿಸುವ ಕೋಡಿಬಾಗದ ರಸ್ತೆ ತುಂಬಾ ಇಳಿಜಾರು ಆಗಿದೆ. ಹೀಗಾಗಿ ಹೆದ್ದಾರಿಗೆ ತೆರಳುವಾಗ ವಾಹನ ಸವಾರರು ಮೈಯೆಲ್ಲಾ ಕಣ್ಣಾಗಿ­ರಬೇಕು. ಚತುಷ್ಪಥ ಕಾಮಗಾರಿ ನಡೆಸು­ತ್ತಿರುವ ಐಆರ್‌ಬಿ ಕಂಪೆನಿಯು ರಸ್ತೆಯ ಇಕ್ಕೆಲಗಳಲ್ಲಿ ಅಗತ್ಯ ಪ್ರತಿಫಲನ ಫಲಕಗಳನ್ನು ಹಾಕಿದೆ. ಆದರೂ ಹಲವು ಬಾರಿ ಚಾಲಕನ ನಿಯಂತ್ರಣ ತಪ್ಪಿ ವಾಹನಗಳು ಹಿಂದೆ ಸರಿದ ನಿದರ್ಶನಗಳಿವೆ.

‘ಕೆಲ ತಿಂಗಳ ಹಿಂದೆ ಗೋವಾಕ್ಕೆ ಹೊರಟ್ಟಿದ್ದ ಕಾರೊಂದು ತಿರುವು ಇರುವುದನ್ನು ಅರಿಯದೇ ರಾತ್ರಿ 12.30ಕ್ಕೆ ಲಂಡನ್‌ ಸೇತುವೆಯಿಂದ ತಲೆಕೆಳಕ್ಕಾಗಿ ಬಿದ್ದಿತ್ತು. ಕಾರಿನಲ್ಲಿದ್ದ ಐದು ಮಂದಿ ಯುವಕರು ತೀವ್ರ ಗಾಯ­ಗೊಂಡು ನರಳಾಡುತ್ತಿದ್ದರು. ಅವರನ್ನು ಗೆಳೆಯರ ನೆರವಿನಿಂದ ಜಿಲ್ಲಾ­ಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸ­ಲಾಯಿತು. ಅದೃಷ್ಟವಶಾತ್‌ ಅವರು ಪ್ರಾಣಾಪಾಯದಿಂದ ಪಾರಾದರು’ ಎನ್ನುತ್ತಾರೆ ಸ್ಥಳೀಯರಾದ ಪಾಂಡುರಂಗ ಹರಿಕಂತ್ರ.

‘ಈ ರೀತಿ ಅನೇಕ ಘಟನೆಗಳು ಇಲ್ಲಿ ನಡೆದಿವೆ. ರಾತ್ರಿ ವೇಳೆ ಇಲ್ಲಿ ತಿರುವು ಇರುವುದು ವಾಹನ ಸವಾರರಿಗೆ ತಿಳಿಯುವುದಿಲ್ಲ. ಹೀಗಾಗಿ ಇಲ್ಲಿ ಸೂಚನಾ ಫಲಕ ಅಳವಡಿಸುವುದು ಒಳಿತು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು’ ಎಂದು ಅವರು ಹೇಳಿದರು.

*
ಹಾಳಾಗಿರುವ ತಡೆಗೋಡೆ ಹಾಗೂ ಮುರಿದು ಬಿದ್ದ ಸೂಚನಾ ಫಲಕವನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಜಕ್ಕಣ್ಣನವರ್‌,
ಸಬ್‌ಇನ್‌ಸ್ಪೆಕ್ಟರ್‌, ಸಂಚಾರ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.