ADVERTISEMENT

ಅಭಿವೃದ್ಧಿ ಹೆಸರಲ್ಲಿ ಇತಿಹಾಸದ ಸಂಕೇತದ ನಾಶ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 5:56 IST
Last Updated 5 ಸೆಪ್ಟೆಂಬರ್ 2017, 5:56 IST

ಕುಮಟಾ: ಇಲ್ಲಿಯ ವನ್ನಳ್ಳಿ ಸಮೀಪದ ಹೆಡ್ ಬಂದರು ಗುಡ್ಡದ ಮೇಲಿರುವ ಬ್ರಿಟಿಷರ ಕಾಲದ ಕಟ್ಟಡದ ಗೋಡೆ ಗಳನ್ನು ಒಡೆದು ಹಾಕಿರುವ ಬಗ್ಗೆ ವಿಮ­ರ್ಶಕ ಹಾಗೂ ಡಾ. ಎ.ವಿ.ಬಾಳಿಗಾ ಕಲಾ–ವಿಜ್ಞಾನ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಎಂ.ಜಿ. ಹೆಗಡೆ  ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಹಿಂದೆ ಅಮೆರಿಕ ಯುದ್ಧ ನಂತರ ಮ್ಯಾಂಚೆಸ್ಟರ್ ಗೆ ಹತ್ತಿಯ ರಫ್ತು ನಿಂತು ಹೋದ ನಂತರ ಭಾರತದಿಂದ ಹತ್ತಿ ಕಳುಹಿಸಲು ಬ್ರಿಟಿಷರು ಬಳಸಿಕೊಂಡಿದ್ದ ಬಂದರುಗಳಲ್ಲಿ ಕುಮಟಾ ಹೆಡ್‌ ಬಂದರು ಒಂದು.

ರಾಜ್ಯದ ಉತ್ತರ ಕರ್ನಾಟಕ ಭಾಗದಿಂದ ಬರುವ ಹತ್ತಿಯನ್ನು ಕುಮಟಾದಿಂದ ಮುಂಬೈ ಮೂಲಕ ಮ್ಯಾಂಚೆಸ್ಟರ್ ಗೆ ಒಯ್ಯಲು ಹೆಡ್ ಬಂದರಿನಲ್ಲಿ ಸಂಗ್ರಹಿಸಿಡಲು ಸುಣ್ಣ, ಬೆಲ್ಲ ಹಾಕಿ ಕಲೆಸಿ ಮಾಡಿದ ಗಾರೆ ಹಾಕಿ ನಿರ್ಮಿಸಿದ್ದ ಕಟ್ಟಡವನ್ನು ಈಗ ಒಡೆದು ಹಾಕಲಾಗಿದೆ. ಸುಮಾರು 200ಕ್ಕೂ ಹೆಚ್ಚು ವರ್ಷ ಕಾಲ ಬಾಳಿದ ಈ ಕಟ್ಟಡ ಗೋಡೆಯ ಮೇಲೆ ಅದಕ್ಕೆ ಹೊಂದುವ ಅದೇ ಮಾದರಿಯ ಚಾವಣಿ ಹಾಕಿ ಅಭಿವೃದ್ಧಿಪಡಿಸಿದ್ದರೆ ಅದು ಪ್ರವಾಸಿಗರ ಪ್ರಮುಖ ಆಕರ್ಷಣೆ ಯಾಗುತ್ತಿತ್ತು ಎಂದು ಅವರು ಹೇಳಿದರು.

ADVERTISEMENT

ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಕಾಮಗಾರಿ ನಡೆಸುತ್ತಿರುವ ಭೂ ಸೇನಾ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ತೀರ್ಥ ಲಿಂಗಪ್ಪ ಅವರನ್ನು ಸಂಪರ್ಕಿಸಿದಾಗ, ‘ಕಟ್ಟಡ ಕುಸಿದು ಬಿದ್ದರೆ ಅಪಾಯ ವಾಗಬಹುದು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದ್ದರಿಂದ ಕಟ್ಟಡ ಕೆಡವಿ ಹಾಕಲಾಗಿದೆ.

ಅದಕ್ಕೆ ಕೇಂದ್ರ ಸೀಮಾ ಸುಂಕ ಇಲಾಖೆ ಆಕ್ಷೇಪಿಸಿದ್ದರಿಂದ ಜಿಲ್ಲಾಧಿಕಾರಿ ಸೂಚನೆಯಂತೆ ಕಾಮಗಾರಿ ಸದ್ಯ ನಿಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಆದೇಶ ಮಾಡಿದರೆ ಮತ್ತೆ ಕಾಮಗಾರಿ ಆರಂಭವಾಗುತ್ತದೆ’ ಎಂದು ಅವರು ತಿಳಿಸಿದರು.

‘ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಭೇಡಿ ನೀಡಿದಾಗ ಹೆಡ್ ಬಂದರಿನಲ್ಲಿರುವ ಹಳೆಯ ಕಟ್ಟಡ ಗೋಡೆ ಕೆಡವಲು ಸೂಚಿಸಿದ ನೆನಪಿಲ್ಲ. ಸುತ್ತಲಿನ ಪರಿಸರ ಅಭಿವೃದ್ಧಿಗೆ ಸೂಚಿಸಿದ್ದರು’ ಎಂದು ಕುಮಟಾ ಉಪವಭಾಗಾಧಿಕಾರಿ ರಮೇಶ ಕಳಸದ ಹೇಳಿದರು.

ಹೆಡ್ ಬಂದರಿನಲ್ಲಿರುವ ಬ್ರಿಟಿಷ ಕಾಲದ ಗೋಡೆಗಳನ್ನು ಕೆಡವಿ ಹಾಕಿ ದಾಗ ಮಂಗಳೂರಿನ ಸೀಮಾ ಸುಂಕ ಇಲಾಖೆಯ ಉಪವಿಭಾಗಾಧಿಕಾರಿ ಅವರು ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿ ತಮ್ಮ ಇಲಾಖೆ ಆಸ್ತಿ ರಕ್ಷಣೆ ಬಗ್ಗೆ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.