ADVERTISEMENT

‘ಅಭ್ಯಾಸದ ಪುನರ್‌ಮನನ ಯಶಸ್ಸಿನ ಗುಟ್ಟು’

​ಪ್ರಜಾವಾಣಿ ವಾರ್ತೆ
Published 13 ಮೇ 2017, 9:36 IST
Last Updated 13 ಮೇ 2017, 9:36 IST

ಶಿರಸಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಶಿರಸಿ ಶೈಕ್ಷಣಿಕ ಜಿಲ್ಲೆ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಆದರೆ ಒಟ್ಟಾರೆಯಾಗಿ ಕಳೆದ ವರ್ಷ ಶೇ 85.55 ಸಾಧನೆಯಾಗಿದ್ದರೆ ಈ ವರ್ಷ ಶೇ 80.09ಕ್ಕೆ ಕುಸಿದಿದೆ.

ಡಿಸೆಂಬರ್ ಅಂತದೊಳಗೆ ಪಠ್ಯಕ್ರಮ ಪೂರ್ಣಗೊಳಿಸಿ ಜನವರಿ ತಿಂಗಳಿನಿಂದ ಪುನರ್‌ಮನನ ಅಭ್ಯಾಸವನ್ನು ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳಲ್ಲಿ ನಡೆಸಿದ್ದು ಉತ್ತಮ ಫಲಿತಾಂಶ ಬರಲು ಮುಖ್ಯ ಕಾರಣವಾಗಿದೆ ಎಂದು ಡಿಡಿಪಿಐ ಎಂ.ಎಸ್. ಪ್ರಸನ್ನಕುಮಾರ್ ಪ್ರತಿಕ್ರಿಯಿಸಿದರು.

ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡಲಾಗಿದೆ. ಅದೇ ರೀತಿ ಅತಿ ಹೆಚ್ಚು ಅಂಕಗಳಿಸಿ ರಾಜ್ಯ ಮಟ್ಟದ ಸ್ಥಾನ ಪಡೆಬಹುದಾದ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳ ತಲಾ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಒಂದು ವಾರದ ವಿಶೇಷ ತರಬೇತಿ ನೀಡಲಾಗಿತ್ತು. ಇವರಿಗೆ ಉಡುಪಿ ಹಾಗೂ ಮಂಗಳೂರಿನಿಂದ ಬಂದಿದ್ದ ವಿಶೇಷ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದ್ದರು. ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆಯಲು ಈ ಕ್ರಮ ತುಂಬಾ ಸಹಕಾರಿಯಾಯಿತು ಎಂದು  ವಿವರಿಸಿದರು.

ADVERTISEMENT

ಪ್ರತಿ ತಾಲ್ಲೂಕಿನಲ್ಲಿ ಐದು ವಿಶೇಷ ಕೇಂದ್ರಗಳನ್ನು ರಚಿಸಿ ಕಲಿಕೆಯಲ್ಲಿ ಹಿಂದುಳಿದ ತಲಾ 50 ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ಮಾದರಿಯಲ್ಲಿ ವಿಷಯ ಶಿಕ್ಷಕರು ಪಾಠ ಮಾಡಿದ್ದರು. ಶೈಕ್ಷಣಿಕ ಜಿಲ್ಲೆಯಲ್ಲಿ ನಡೆದ ಸಂದರ್ಶನ ಸಪ್ತಾಹ ಅತ್ಯಂತ ಪರಿಣಾಮಕಾರಿ ಯಾಗಿದೆ.

ಆರು ಬಿಇಒಗಳು, ಡಿಡಿಪಿಐ, ಶಿಕ್ಷಣ ಅಧಿಕಾರಿ ನೇತೃತ್ವದ ವಿಷಯ ಶಿಕ್ಷಕರನ್ನೊಳಗೊಂಡ ಎಂಟು ತಂಡಗಳು ಪ್ರತಿ ಶಾಲೆಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಸಿದ್ಧತೆಗೆ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ನೀಡಿದ್ದವು. ಎಲ್ಲ ತಾಲ್ಲೂಕು ಗಳಲ್ಲಿ ರಚಿಸಿದ್ದ ನುರಿತ ಶಿಕ್ಷಕರ ತಂಡ ಅಗತ್ಯವಿರುವ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ನಿರ್ದಿಷ್ಟ ವಿಷಯಗಳ ಬಗ್ಗೆ ಇದ್ದ ಅನುಮಾನ, ಗೊಂದಲಗಳನ್ನು ನಿವಾರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದು ಸಾಕಷ್ಟು ಅನುಕೂಲವಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.