ADVERTISEMENT

ಅರಣ್ಯ ವಿದ್ಯಾರ್ಥಿಗಳಿಗೆ ಬೆಸೆದ ಕಾಡಿನ ನಂಟು

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:10 IST
Last Updated 17 ಜುಲೈ 2017, 7:10 IST

ಶಿರಸಿ: ಪ್ರಾಣಿಗಳ ಒಡನಾಟ, ಹಕ್ಕಿಗಳ ಜೀವನ ಕ್ರಮ ಅಧ್ಯಯನ, ಜೀವವೈವಿಧ್ಯ ದಾಖಲಾತಿಯಲ್ಲಿ ವಿಶೇಷ ಆಸಕ್ತಿ ತೋರುತ್ತಿರುವ ಇಲ್ಲಿನ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಕಾಡಿನ ಒಡ ನಾಟದಲ್ಲಿ ಪ್ರಯೋಗಿಕ ಶಿಕ್ಷಣ ಪಡೆಯುತ್ತಿದ್ದಾರೆ.

ಮಾನಸಿಕ ಮತ್ತು ದೈಹಿಕ ಸದೃಢತೆಯ ಜೊತೆಗೆ ಮಕ್ಕಳಿಗೆ ಕಾಡಿನ ಸಂಬಂಧ ಬೆಳೆಸುವ ಭಾಗವಾಗಿ ಅರಣ್ಯ ಕಾಲೇಜು ನಡೆಸುವ ಅರಣ್ಯವಾಸವು ವಿದ್ಯಾರ್ಥಿಗಳಿಗೆ ಹಲವಾರು ಆಯಾಮಗಳ ಅನುಭವ ನೀಡುತ್ತಿದೆ. ಕಾಲೇಜಿನ 20 ವರ್ಷಗಳ ಇತಿಹಾಸದಲ್ಲಿ 9200 ಮಾನವ ದಿನಗಳನ್ನು ಇಲ್ಲಿನ ವಿದ್ಯಾರ್ಥಿ ಗಳು ಪರಿಸರದ ಮಡಿಲಲ್ಲಿ ಕಳೆದಿದ್ದಾರೆ.

ರಾಜ್ಯದ ವಿವಿಧ ಭಾಗಗಳ ಕಾಡಿನಲ್ಲಿ ಹಗಲು- ರಾತ್ರಿ ಉಳಿದ ವಿದ್ಯಾರ್ಥಿಗಳು ಜೀವ ವೈವಿಧ್ಯ ದಾಖಲಾತಿ ಮಾಡಿದ್ದಾರೆ. ಗೇರುಸೊಪ್ಪ, ದೇವಿಮನೆ ಅರಣ್ಯ, ಕತ್ತಲೆ ಕಾನು, ಶರಾವತಿ ಹಾಗೂ ಅಘನಾಶಿನಿ ಕೊಳ್ಳ, ಭೀಮಗಡ, ಮಾಗೋಡ, ಗಣೇಶಗುಡಿ, ದಾಂಡೇಲಿ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ವಾಸ್ತವ್ಯ ಮಾಡಿ ಪ್ರಾಣಿಗಳ ಒಡನಾಟ, ಪಕ್ಷಿ ವೀಕ್ಷಣೆ, ಪ್ರಾಣಿಗಳ ಹೆಜ್ಜೆ ಗುರುತು, ಹಿಕ್ಕೆ ಗುರುತು ಹಾಗೂ ಮೂತ್ರದ ವಾಸನೆ ಮೂಲಕ ಪ್ರಾಣಿ ಗುರುತಿಸುವುದು, ಕಾಡ್ಗಿಚ್ಚು ಆರಿಸುವ ಕ್ರಮಗಳನ್ನು ಕಲಿತಿದ್ದಾರೆ ಎನ್ನುತ್ತಾರೆ ಕಾಲೇಜಿನ ಡೀನ್ ಎಚ್‌. ಬಸಪ್ಪ.

ADVERTISEMENT

‘ಪದವಿಯಿಂದ ಬರುವ ಅನುಭವ ಕ್ಕಿಂತ ಕಾಡಿನ ಒಡನಾಟದಿಂದ ಸಿಗುವ ಅನುಭವ ಮಾನಸಿಕ ಅರಿವು ನೀಡು ತ್ತದೆ. ಹೊನ್ನಾವರ ವಿಭಾಗದಲ್ಲಿ ಸಿಂಗಳಿಕ ಗಣತಿ, ಕೈಗಾ, ಸೀಬರ್ಡ್ ಮ್ಯಾರಾ ಥಾನ್, ಭೀಮಗಡದ ಜೀವ ವೈವಿಧ್ಯ ಸರ್ವೆಯಲ್ಲಿ ಭಾಗಿಯಾಗಿದ್ದೆ. ಕಾಲೇಜಿಗೆ ಸೇರಿದ ಮೇಲೆ ಪದವಿ ಶಿಕ್ಷಣದ ಶೇ 40ರಷ್ಟು ಅವಧಿಯನ್ನು ಕಾಡಿನಲ್ಲಿ ಕಳೆ ಯುವುದು ವಿಶೇಷ ಅನುಭವವಾಗಿದೆ’ ಎನ್ನುತ್ತಾರೆ ಸಂಶೋಧನೆ   ನಡೆಸುತ್ತಿರುವ ವಿದ್ಯಾರ್ಥಿ ಪ್ರಭುಗೌಡ ಬಿರಾದಾರ.

‘ವಿದ್ಯಾರ್ಥಿಗಳ ತಂಡ ರಚಿಸಿ ಕೊಂಡು ಪ್ರಾಣಿ, ಪಕ್ಷಿ, ಸಸ್ಯ, ಸಸ್ತನಿ, ಸರಿಸೃಪ, ಕ್ರಿಮಿಕೀಟಗಳ ಬಗ್ಗೆ  ಅಧ್ಯಯನ ಮಾಡಿ ಸಂಗ್ರಹಿಸಿದ ಮಾಹಿತಿಯನ್ನು ದಾಖಲಿಸುತ್ತೇವೆ. ಕಾಲೇಜಿನ ಸುತ್ತಮುತ್ತ ನೀಲಕಂಠ, ನವರಂಗಿ, ಹಾರ್ನ್‌ ಬಿಲ್, ಕೆಂಬೂತ ಸೇರಿ 218 ಜಾತಿಯ ಹಕ್ಕಿಗಳನ್ನು ಗುರುತಿಸಿದ್ದೇವೆ. 40 ಜಾತಿಯ ಕಪ್ಪೆ, 50 ಜಾತಿಯ ಹಾವು, 80ರಿಂದ 100 ಬಗೆಯ ಚಿಟ್ಟೆ ಗುರುತಿಸಿದ್ದೇವೆ’ ಎನ್ನುತ್ತಾರೆ ವಿದ್ಯಾರ್ಥಿ ಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.