ADVERTISEMENT

ಒಡೆದ ತಡೆಗೋಡೆ: ಅಪಾಯಕ್ಕೆ ಆಹ್ವಾನ

ಕಿತ್ತು ಹೋಗಿರುವ ಕಬ್ಬಿಣದ ಸರಳುಗಳು, ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಹಾನಿ ನಿಶ್ಚಿತ, ವಾಹನ ಸವಾರರಲ್ಲಿ ಆತಂಕ

ಪಿ.ಕೆ.ರವಿಕುಮಾರ
Published 9 ಜನವರಿ 2017, 8:27 IST
Last Updated 9 ಜನವರಿ 2017, 8:27 IST
ಕಾರವಾರ: ಇಲ್ಲಿನ ಕಾಯ್ಕಿಣಿ ರಸ್ತೆಯ­ಲ್ಲಿನ ನಾಲೆಯ ತಡೆಗೋಡೆ ಒಡೆದಿದ್ದು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿ­ದರೂ ಜೀವ ಹಾನಿ ನಿಶ್ಚಿತ. ಹೀಗಾಗಿ ಈ ಭಾಗದಲ್ಲಿ ನಿತ್ಯ ಸಂಚರಿಸುವ ಜನರಲ್ಲಿ ಇದು ಆತಂಕ ಮೂಡಿಸಿದೆ. 
 
ಕಿರಿದಾದ ಈ ರಸ್ತೆಯು ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಲಾಡ್ಜ್‌, ಹೋಟೆಲ್‌, ಬ್ಯಾಂಕ್‌ ಹಾಗೂ ವಾಣಿಜ್ಯ ಸಂಕೀರ್ಣಗಳು ಇರುವುದರಿಂದ ಜನಸಂದಣಿ ಕೂಡ ಹೆಚ್ಚಾಗಿರುತ್ತದೆ. ಹಬ್ಬುವಾಡದಿಂದ ಬರುವ ವಾಹನ ಸವಾರರು ಈ ರಸ್ತೆಯ ಮೂಲಕ ಕಾರವಾರದ ಮುಖ್ಯರಸ್ತೆಗೆ ಹಾದು­ಹೋಗ­ಬೇಕು. ಆದರೆ ಈ ಭಾಗದಲ್ಲಿನ ಈ ನಾಲೆಯು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಇಲ್ಲಿನ ನಾಲೆಯ ತಡೆಗೋಡೆ­ಯನ್ನು ಚೀರೆಕಲ್ಲಿನಿಂದ ನಿರ್ಮಿಸಲಾಗಿ­ದ್ದು, ಕಾಲಕ್ರಮೇಣ ಒಂದು ಭಾಗ ಸಡಿಲಗೊಂಡು ಕಿತ್ತು ಹೋಗಿದೆ. ಇದು ಹಾಳಾಗಿ ಅನೇಕ ತಿಂಗಳುಗಳು ಕಳೆದರೂ ನಗರಸಭೆಯಿಂದ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ಅಲ್ಲದೇ ನಾಲೆಗೆ ನಿರ್ಮಿಸಿರುವ ಸೇತುವೆ ಕೂಡ ನಿರ್ವಹಣೆ ಇಲ್ಲದೇ ಸೊರಗಿದೆ. ಅಲ್ಲಲ್ಲಿ ಒಣ ಹುಲ್ಲುಗಳು ಬೆಳೆದಿದ್ದು, ಕಸ ತುಂಬಿ ತುಳುಕುತ್ತಿದೆ. 
 
ಸೊಳ್ಳೆಗಳ ಕಾಟ  
ತೆರೆದ ನಾಲೆಯಲ್ಲಿ ಕೊಳಚೆ ನೀರು ಸದಾ ನಿಂತಿರುತ್ತದೆ. ಹೀಗಾಗಿ ಈ ಭಾಗದಲ್ಲಿ ಸೊಳ್ಳೆಗಳ ಕಾಟ ವಿಪರೀತ. ಅಲ್ಲದೇ ಒಮ್ಮೊಮ್ಮೆ ದುರ್ನಾತ ಕೂಡ ಬೀರುತ್ತಿರುತ್ತದೆ. ಸಮೀಪದ ಲಾಡ್ಜ್‌ ಕೊಠಡಿಯ ಕಿಟಕಿ ಸ್ವಲ್ಪ ತೆರೆದರೂ ಸೊಳ್ಳೆ ಮುತ್ತಿಕೊಳ್ಳುತ್ತವೆ. ಅಲ್ಲದೇ ಸಮೀಪದ ಮಳಿಗೆಗಳ ಮಾಲೀಕರು ಹಾಗೂ ಗ್ರಾಹಕರು ಇದರಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. 
 
‘ಹಬ್ಬುವಾಡ ಹಾಗೂ ಕಾಜು­ಬಾಗದ ನಾಲೆಗಳಿಂದ ಹರಿದು ಬರುವ ಕೊಳಚೆ ನೀರು ಈ ಭಾಗದಲ್ಲಿ ಸಂದಿಸುತ್ತದೆ. ಆಗಾಗ ತುಂಬಿಕೊಳ್ಳುವ ಹೂಳನ್ನು ತೆಗೆಯಬೇಕಾದ್ದರಿಂದ ಚರಂಡಿಯ ಮೇಲ್ಭಾಗಕ್ಕೆ ಸ್ಲ್ಯಾಬ್ ಅಳವಡಿಸಿಲ್ಲ. ಈ ಮಲಿನ ನೀರು ನಿಲ್ಲದೇ ಸರಾಗವಾಗಿ ಹರಿದು ಹೋಗಲು ಹಾಗೂ ಹೂಳು ತುಂಬಿ­ಕೊಳ್ಳದಂತೆ ನೋಡಿಕೊಳ್ಳಲು ಅತ್ಯಾಧು­ನಿಕ ತಂತ್ರಜ್ಞಾನ ಬಳಸಿಕೊ­ಳ್ಳುವ ಕುರಿತು ಚಿಂತಿಸಲಾಗುವುದು’ ಎಂದು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎಂ.ಮೋಹನರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.  
 
***
ದುರ್ವಾಸನೆ
ಈ ನಾಲೆಯಲ್ಲಿ ಕೊಳಚೆ ನೀರು ನಿಂತು ದುರ್ವಾ­ಸನೆ ಬೀರುತ್ತಿದೆ. ಅಲ್ಲದೇ ಸೊಳ್ಳೆಗಳ ಉತ್ಪತ್ತಿ ತಾಣ ಕೂಡ ಆಗಿದೆ. ಎರಡು ಕಡೆಗಳಲ್ಲೂ ತಡೆಗೋಡೆ ಹಾಳಾಗಿರುವುದರಿಂದ ಬೈಕ್‌ ಸವಾರರು ಹಾಗೂ ಪಾದಚಾರಿ­ಗಳು ಸಮಸ್ಯೆ ಎದುರಿಸ­ಬೇಕಾ­ಗಿದೆ. ನಾಲೆ ನಿರ್ಮಾಣದ ಸಂದ­ರ್ಭ­ದಲ್ಲಿ ಕಾಂಕ್ರೀಟ್‌ಗೆ ಹಾಕಿದ ಕಬ್ಬಿಣದ ಸರಳುಗಳು ಮೇಲ್ಮುಖ­ವಾಗಿ ನಿಂತಿವೆ. ವಾಹನದಲ್ಲಿ ಸಂಚರಿಸುವಾಗ ನಿಯಂತ್ರಣ ತಪ್ಪಿ ತಡೆಗೋಡೆ ಬದಿಗೆ ಸರಿದರೆ ನಾಲೆಗೆ ಬೀಳುವುದು ನಿಶ್ಚಿತ. ಅಲ್ಲದೇ ಚೂಪಾದ ಸರಳುಗಳು ನಮ್ಮ ಜೀವಕ್ಕೆ ಕುತ್ತು ತರುವ ಸಾಧ್ಯತೆ ಕೂಡ ಹೆಚ್ಚು ಎಂದು ಬೈಕ್‌ ಸವಾರ ಕಿರಣ ನಾಯ್ಕ ಹೇಳಿದರು.
 
**
ನಾಲೆಯ ತಡೆಗೋಡೆಯ ಅವ್ಯವಸ್ಥೆಯನ್ನು ಪರಿಶೀಲಿಸಿ, ಆನಂತರ ಅದರ ದುರಸ್ತಿಗೆ ಕ್ರಮ ವಹಿಸಲಾಗುವುದು
-ಆರ್‌.ವಿ.ಜತ್ತನ್ನ
ಪೌರಾಯುಕ್ತ  
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.