ADVERTISEMENT

ಕಂದಾಯ ಸಚಿವ ಕಾಗೋಡು ಹೇಳಿಕೆಗೆ ಖಂಡನೆ

ಅರಣ್ಯ ಕಾಯ್ದೆ ಉಲ್ಲಂಘನೆಗೆ ಕುಮ್ಮಕ್ಕು: ಪರಿಸರವಾದಿಗಳ ಆರೋಪ

​ಪ್ರಜಾವಾಣಿ ವಾರ್ತೆ
Published 12 ಮೇ 2017, 11:51 IST
Last Updated 12 ಮೇ 2017, 11:51 IST
ಕಂದಾಯ ಸಚಿವ ಕಾಗೋಡು ಹೇಳಿಕೆಗೆ ಖಂಡನೆ
ಕಂದಾಯ ಸಚಿವ ಕಾಗೋಡು ಹೇಳಿಕೆಗೆ ಖಂಡನೆ   
ಶಿರಸಿ: ಅರಣ್ಯ ಇಲಾಖೆ ನೆಟ್ಟ ಗಿಡಗಳನ್ನು ಕಡಿದು ಬಗರ್‌ಹುಕುಂ ಸಾಗುವಳಿ ಮಾಡಿ ಎಂದು ರೈತರಿಗೆ ಕರೆ ನೀಡಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆಗೆ ಪರಿಸರವಾದಿಗಳ ತೀವ್ರ ವಿರೋಧ ವ್ಯಕ್ತಪಡಿಸಿರುವ ಪರಿಸರವಾದಿಗಳು ಇಂತಹ ಕಾನೂನು ವಿರೋಧಿ ಹೇಳಿಕೆ ನೀಡುವುದು ಕ್ರಿಮಿನಲ್ ಅಪರಾಧವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. 
 
‘ಕಂದಾಯ ಸಚಿವರು ಹೋದ ಕಡೆಗಳೆಲ್ಲ ಅರಣ್ಯ ಮುಖ್ಯ ಅಲ್ಲ ಎನ್ನುತ್ತ ಅರಣ್ಯ ಪ್ರದೇಶ ಒತ್ತುವರಿಗೆ ಪ್ರಚೋದನೆ ನೀಡುವ ಹೇಳಿಕೆ ನೀಡುತ್ತಾರೆ. ಆ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ.
 
ಪ್ರಾಮಾಣಿಕ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸುವ ಜೊತೆಗೆ ಸ್ಥಾನಿಕ ಅಧಿಕಾರಿಗಳ ಮೇಲೆ ಸಚಿವರು ಒತ್ತಡ ಹೇರುತ್ತಾರೆ. ಕಾನು, ಜಾಡಿ, ಗೋಮಾಳ, ಬೆಟ್ಟ ಮೊದಲಾದ ಕಂದಾಯ ಅರಣ್ಯಗಳನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಆದೇಶಿಸುತ್ತಾರೆ’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ  ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಅವರು ಆರೋಪಿಸಿದರು.
 
‘ಹಿರಿಯ ರಾಜಕೀಯ ಮುಖಂಡರಾಗಿ, ಮಲೆನಾಡಿನ ಮಣ್ಣಿನ ಮಗನಾಗಿ ಅರಣ್ಯ ನಾಶ ಮಾಡಲು ಪ್ರಚೋದನೆ ನೀಡುವುದು ಅಕ್ಷಮ್ಯ ಅಲ್ಲವೇ’ ಎಂದು ಸಚಿವರನ್ನು ಪ್ರಶ್ನಿಸಿದ್ದಾರೆ. 
 
‘ಇಂದಿನ ಜಲಕ್ಷಾಮ ಮತ್ತು ಬರಗಾರಲದ ಸ್ಥಿತಿಯನ್ನು ಅರಿತು ಎಲ್ಲೆಡೆ ಹಸಿರೀಕರಣ ಹಾಗು ಜಲಸಂವರ್ಧನೆಗೆ ಹೆಚ್ಚಿನ ಆದ್ಯತೆ ನೀಡುವ ಬದಲಾಗಿ ಅರಣ್ಯ ನಾಶ ಮಾಡಲು ಹೊರಟಿರುವುದನ್ನು ರಾಜಕೀಯ ಪಕ್ಷಗಳು, ಸಾರ್ವಜನಿಕರು ಖಂಡಿಸಬೇಕು. 
 
ಶಿವಮೊಗ್ಗದ ಪಶ್ಚಿಮಘಟ್ಟ ಉಳಿಸಿ ಆಂದೋಲನದ ಸಂಚಾಲಕ ಪ್ರೊ. ಬಿ.ಎಂ. ಕುಮಾರಸ್ವಾಮಿ, ವಿಜ್ಞಾನಿಗಳಾದ ಟಿ.ವಿ. ರಾಮಚಂದ್ರ, ಸುಭಾಸ್‌ಚಂದ್ರನ್, ಸಸ್ಯಶಾಸ್ತ್ರಜ್ಞ ಕೇಶವ ಕೊರ್ಸೆ, ಬೆಂಗಳೂರು ಸಮಗ್ರವಿಕಾಸ ಸಂಘಟನೆ ಅಧ್ಯಕ್ಷ ವೈ.ಬಿ. ರಾಮಕೃಷ್ಣ, ಸಾಗರ ವಿಜ್ಞಾನ ಕೇಂದ್ರದ ಸಂಚಾಲಕ ಕೆ. ವೆಂಕಟೇಶ, ಕುಮಾರಧಾರ ಪರಿಸರ ಸಮಿತಿಯ ಕರುಣಾಕರ ಗೋಗಟೆ, ಪರಿಸರವಾದಿಗಳಾದ ಗಜೇಂದ್ರ ಗೊರಸುಕುಡಿಗೆ, ಶಾಂತಾರಾಮ ಸಿದ್ದಿ ಅವರು ಸಚಿವರ ಹೇಳಿಕೆಯನ್ನು ವಿರೋಧಿಸಿದ್ದಾರೆ’ ಎಂದು ಹೇಳಿದರು. 
 
‘ಶಾಲೆ– ಕಾಲೇಜುಗಳಲ್ಲಿ ದಿನಪತ್ರಿಕೆ ಓದುವ ಮಕ್ಕಳಿಗೆ ಸಚಿವರ ಇಂತಹ ಹೇಳಿಕೆ ಗೊಂದಲ ಸೃಷ್ಟಿಸಬಹುದು. ಸರ್ಕಾರ ಮಕ್ಕಳಿಗ ವನ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೊದಲು ಸಚಿವರಿಗೆ ಪರಿಸರ ರಕ್ಷಣೆಯ ಅರಿವು ಮೂಡಿಸಬೇಕು’ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.