ADVERTISEMENT

‘ಕಪ್ಪು ಹಣ ಇದ್ದವರಿಗೆ ಮಾತ್ರ ಮರುಕ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 8:34 IST
Last Updated 9 ನವೆಂಬರ್ 2017, 8:34 IST

ಶಿರಸಿ: ಗರಿಷ್ಠ ಮುಖಬೆಲೆಯ ನೋಟು ಅಮಾನ್ಯೀಕರಣಗೊಂಡು ನ.8ಕ್ಕೆ ಒಂದು ವರ್ಷ ಪೂರ್ಣಗೊಂಡ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಬುಧವಾರ ಕಪ್ಪು ಹಣ ವಿರೋಧಿ ದಿನ ಆಚರಿಸಿದರು. ಸಾಂಕೇತಿಕವಾಗಿ ಕಪ್ಪು ಹಣದ ಪೆಟ್ಟಿಗೆಗೆ ಬೆಂಕಿ ಹಾಕಿ ಸುಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೋಟು ರದ್ದುಗೊಳಿಸಿದ ಕ್ರಮಕ್ಕೆ ದೇಶದ ಕೋಟ್ಯಂತರ ಜನರು ಅಭಿನಂದನೆ ಹೇಳುತ್ತಿದ್ದಾರೆ. ಏಳು ದಶಕಗಳಿಂದ ದೇಶವನ್ನು ಆಳಿದ ಕಾಂಗ್ರೆಸ್ ಅಧಿಕಾರ ಇರುವುದು ಸ್ವಂತಕ್ಕೆ ಎಂದು ತಿಳಿದುಕೊಂಡಿತ್ತು. ಕಪ್ಪು ಹಣ ದೇಶದೆಲ್ಲೆಡೆ ಅಧಿಕವಾಗಿರುವ ಸಂದರ್ಭದಲ್ಲಿ ಮೋದಿ ನೋಟು ರದ್ದುಗೊಳಿಸಿದರು’ ಎಂದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಮಾತನಾಡಿ, ‘2016ರ ನವೆಂಬರ್ 8, ಇಡೀ ಜಗತ್ತು ಭಾರತದತ್ತ ನಿಬ್ಬೆರಗಾಗಿ ನೋಡಿದ ದಿನ. ಮೋದಿ ಅವರು ಗರಿಷ್ಠ ಮುಖಬೆಲೆಯ ನೋಟು ರದ್ದುಗೊಳಿಸಿರುವ ತೀರ್ಮಾನ ಪ್ರಕಟಿಸಿದಾಗ ಕಾಂಗ್ರೆಸ್ಸಿಗರನ್ನು ಹೊರತುಪಡಿಸಿ ಬಹುತೇಕರು ಸ್ವಾಗತಿಸಿದರು. ಕಪ್ಪು ಹಣ ಇದ್ದವರು ಮಾತ್ರ ಮರುಗಿದರು’ ಎಂದು ಟೀಕಿಸಿದರು.

ADVERTISEMENT

ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ‘ನೋಟು ಅಮಾನ್ಯೀಕರಣದಿಂದ ಜನಸಾಮಾನ್ಯರಿಗೆ ತೊಂದರೆಯಾಗಿಲ್ಲ. ನಾವು ರೇಷನ್ ಪಡೆಯಲು ಸರದಿಯಲ್ಲಿ ನಿಲ್ಲುತ್ತೇವೆ. ಆದರೆ ನೋಟು ರದ್ದತಿಯಾದಾಗ ಕೆಲ ದಿನ ಜನರು ಸರದಿಯಲ್ಲಿ ನಿಂತಿದ್ದನ್ನೇ ಕಾಂಗ್ರೆಸ್‌ನವರು ದೊಡ್ಡ ಸುದ್ದಿ ಮಾಡಿದರು’ ಎಂದರು.

ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ.ಹೆಗಡೆ, ಪ್ರಮುಖರಾದ ನಂದನ ಸಾಗರ, ರಿತೇಶ ಕೆ, ನಾಗರಾಜ ನಾಯ್ಕ, ಇಂದ್ರೇಶ ನಾಯ್ಕ, ರಾಕೇಶ ತಿರುಮಲೆ, ಸಿಕಂದರ್ ಶುಂಠಿ, ಪವಿತ್ರಾ ಹೊಸೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.