ADVERTISEMENT

ಕಾಂಗ್ರೆಸ್‌ನಿಂದ ದುರಾಡಳಿತ: ಬಿಜೆಪಿ ಟೀಕೆ

ಬೀಳಗಿಯಲ್ಲಿ ನಡೆದ ದೊಡ್ಮನೆ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಸಾರ್ವಜನಿಕ ಸಭೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 9:14 IST
Last Updated 10 ಏಪ್ರಿಲ್ 2018, 9:14 IST

ಸಿದ್ದಾಪುರ: ‘ಸಿದ್ದರಾಮಯ್ಯ ಅವರಂಥ ದುರಹಂಕಾರದ ಮುಖ್ಯಮಂತ್ರಿಯನ್ನು ರಾಜ್ಯ ಎಂದೂ ನೋಡಿಲ್ಲ’ ಎಂದು ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್‌ ಕುಮಾರ್ ಹೇಳಿದರು.

ಬಿಜೆಪಿಯ ತಾಲ್ಲೂಕು ಮಂಡಳದ ಆಶ್ರಯದಲ್ಲಿ ಬೀಳಗಿಯಲ್ಲಿ ಸೋಮವಾರ ನಡೆದ ದೊಡ್ಮನೆ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯನವರ ಆಡಳಿತ ಕಳೆದ 5 ವರ್ಷಗಳಲ್ಲಿ ಯಾವ ರೀತಿ ಇತ್ತು ಎಂದು ನೋಡಿದ್ದೇವೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು. ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಮುಂದಿನ 5 ವರ್ಷವೂ ಅವರೇ ( ಸಿದ್ದರಾಮಯ್ಯ) ಮುಖ್ಯಮಂತ್ರಿಯಾದರೆ ಹೇಗಿರುತ್ತದೆ ಎಂಬುದನ್ನು ಊಹೆ ಮಾಡಲು ಅಸಾಧ್ಯ’ ಎಂದರು.

ADVERTISEMENT

‘144ನೇ ಕಲಂ ವಿಧಿಸಿ, ಈ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಿತು. ಈ ಸರ್ಕಾರದ ಅವಧಿಯಲ್ಲಿ ನಮ್ಮ 23 ಕಾರ್ಯಕರ್ತರನ್ನು ಕಳೆದುಕೊಂಡೆವು. 3,700 ರೈತರು ಆತ್ಮಹತ್ಯೆ ಮಾಡಿಕೊಂಡರು. ಲಿಂಗಾಯಿತ, ವೀರಶೈವ ಎಂದು ಒಡೆದರು. ಯಾಕೆ ಮತ್ತೊಮ್ಮೆ ಹಿಂದೂಗಳು ಕಾಂಗ್ರೆಸ್‌ಗೆ ಮತ ನೀಡಬೇಕು ಎಂಬುದನ್ನು ಯೋಚನೆ ಮಾಡಬೇಕಾಗಿದೆ’ ಎಂದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ ಈ ಕ್ಷೇತ್ರದಲ್ಲಿ ನಾನು ಗೆಲ್ಲಲಿದ್ದೇನೆ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. ನಾನು ಸಚಿವನೂ ಆಗಲಿದ್ದೇನೆ. ಜೆಡಿಎಸ್ ಬಗ್ಗೆ ಮಾತನಾಡಲು ಬಯಸುವುದಿಲ್ಲ. ದೇವೇಗೌಡರ ಪ್ರಾರ್ಥನೆ ಒಂದೇ. ಅದು ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಬಹುಮತ ಪಡೆಯಕೂಡದು ಎಂಬುದು. ಜೆಡಿಎಸ್ ಪಕ್ಷದ ಈ ಕನಸು ನನಸಾಗಲಾರದು. ಜೆಡಿಎಸ್ ರಾಜ್ಯದಲ್ಲಿ ಮತ್ತು ಈ ಕ್ಷೇತ್ರದಲ್ಲಿ ಅಪ್ರಸ್ತುತವಾಗಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್, ಜಿಲ್ಲಾ ಸಮಿತಿಯ ರವಿ ಹೆಗಡೆ ಹೂವಿನಮನೆ, ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜ ನಾಯ್ಕ ಮಾತನಾಡಿದರು.ಬಿಜೆಪಿ ತಾಲ್ಲೂಕು ಮಂಡಳದ ಅಧ್ಯಕ್ಷ ಎಂ.ವಿ.ಭಟ್ಟ ತಟ್ಟಿಕೈ, ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ, ವಿನಯ ಹೊನ್ನೇಗುಂಡಿ, ಗಜಾನನ ನಾಯ್ಕ ಬಿಳಗಿ ಇದ್ದರು.

ಹಿಂದುತ್ವ, ಅಭಿವೃದ್ಧಿಯೇ ಮಾನದಂಡ

ಸಿದ್ದಾಪುರ: ಈ ಬಾರಿ ಹಿಂದುತ್ವ ಹಾಗೂ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಗೆ ಹೋಗಲಿದ್ದೇನೆ’ ಎಂದು ಕಾರ್ಕಳ ಕ್ಷೇತ್ರದ ಬಿಜೆಪಿಯ ಘೋಷಿತ ಅಭ್ಯರ್ಥಿ ಸುನಿಲ್ ಕುಮಾರ್ ತಿಳಿಸಿದರು.ತಾಲ್ಲೂಕಿನ ಬಿಳಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ‘ಬಿಜೆಪಿಯಲ್ಲಿ ಟಿಕೆಟ್ ಘೋಷಣೆ ನಂತರ ಹೊರಬಿದ್ದಿರುವ ಅಸಮಾಧಾನದ ಭಾವನೆಗಳು ಎರಡು ದಿನಗಳಲ್ಲಿ ಶಮನ ಆಗಲಿವೆ. ನಾವು 150 ಸ್ಥಾನಗಳನ್ನು ಗೆಲ್ಲಲಿದ್ದೇವೆ’ ಎಂದರು.

**

ಜೆಡಿಎಸ್ ಪಕ್ಷದವರು ಅಪಪ್ರಚಾರ ಮಾಡುವುದರಲ್ಲಿ ನಿಸ್ಸೀಮರು. ಅವರಿಗೆ ಮತ ಹಾಕಿದರೆ ಆ ಮತ ಹಾಳಾದಂತೆ – ವಿಶ್ವೇಶ್ವರ ಹೆಗಡೆ ಕಾಗೇರಿ,ಶಾಸಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.