ADVERTISEMENT

‘ಕಾನೂನು ಅರಿವಿನಿಂದ ಸ್ವಸ್ಥ ಸಮಾಜ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 6:21 IST
Last Updated 19 ನವೆಂಬರ್ 2017, 6:21 IST

ಹೊನ್ನಾವರ: ‘ಶಾಲಾ– ಕಾಲೇಜು ಹಂತ ಮನುಷ್ಯನ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟ. ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಅಭ್ಯಸಿಸಿ ಬದುಕಿನಲ್ಲಿ ಯಶಸ್ಸು ಸಾಧಿಸುವ ಜತೆಗೆ, ಪಾಲಕರು ಹಾಗೂ ಸಮಾಜದ ಋಣ ತೀರಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿ ಚನ್ನಕೇಶವ ರೆಡ್ಡಿ ಸಲಹೆ ನೀಡಿದರು.

ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯ ಅಂಗವಾಗಿ ಶುಕ್ರವಾರ ಇಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನೈತಿಕ ಮೌಲ್ಯಗಳನ್ನು, ಕಾನೂನು ಅರಿವನ್ನು ಹೊಂದಿ ಉತ್ತಮ ನಾಗರಿಕರಾಗಬೇಕು. ಆ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸಬೇಕು’ ಎಂದು ಹೇಳಿದರು.

ಜೆಎಂಎಫ್‌ಸಿ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶೆ ಸನ್ಮತಿ ಎಸ್.ಆರ್ ಮಾತನಾಡಿ, ‘ರಸ್ತೆಯಲ್ಲಿ ವಾಹನ ಚಾಲನೆ ಆರಂಭಿಸುವ ಮೊದಲು ಪರಾವನಗಿ ಪಡೆಯಬೇಕು. ನಿಯಮಾನುಸಾರ ಅಂತರ್ಜಾಲದ ಬಳಕೆ ಮಾಡಬೇಕು. ಕಾನೂನು ತಿಳಿವಳಿಕೆ ಅತೀ ಅವಶ್ಯವಾಗಿ ಹೊಂದಿರಬೇಕು’ ಎಂದರು.

ADVERTISEMENT

ಪ್ರಧಾನ ಸಿವಿಲ್ ನ್ಯಾಯಾಧೀಶ ಮಧುಕರ ಪಿ.ಭಾಗವತ, ‘ಕಾನೂನು ನೈತಿಕತೆಯಿಂದ ಹೊರತಾಗಿಲ್ಲ. ಯುವಕರು ತಮ್ಮನ್ನು ರೂಪಿಸಿದ ಪಾಲಕರು, ಹಿರಿಯರು ಹಾಗೂ ಸಮಾಜ ವನ್ನು ಕಡೆಗಣಿಸಬಾರದು. ಕಾನೂನು ಪಾಲಿಸುವ ಸಜ್ಜನರಾಗಬೇಕು’ ಎಂದು ಸಲೆ ನೀಡಿದರು.

ಸಹಾಯಕ ಸರ್ಕಾರಿ ವಕೀಲ ಬದರೀನಾಥ ನಾಯರಿ, ವಕೀಲರಾದ ವಿ.ಎಂ ಭಂಡಾರಿ, ಜಿ.ಪಿ ಹೆಗಡೆ, ಉಮಾ ನಾಯ್ಕ, ಶರಾವತಿ ಹೆಗಡೆ, ಪಿಎಸ್‌ಐ ಆನಂದಮೂರ್ತಿ, ಪ್ರಾಂಶುಪಾಲ ಎಂ.ಎಚ್ ಭಟ್ಟ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.