ADVERTISEMENT

ಕಾರವಾರಕ್ಕೆ ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು

ಪಿ.ಕೆ.ರವಿಕುಮಾರ
Published 17 ಏಪ್ರಿಲ್ 2017, 7:04 IST
Last Updated 17 ಏಪ್ರಿಲ್ 2017, 7:04 IST

ಕಾರವಾರ:  ಸಮಾಜಘಾತುಕ ಚಟು­ವಟಿಕೆ­ಗಳ ಮೇಲೆ ನಿಗಾ ವಹಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾ­ಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯು ನಗರದ ಆಯಕಟ್ಟಿನ ಸ್ಥಳಗಳಲ್ಲಿ ಒಟ್ಟು 15 ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಲು ಸಿದ್ಧತೆ ನಡೆಸಿದೆ.ಜಿಲ್ಲಾ ಕೇಂದ್ರವಾದ ಕಾರವಾರ ನಗರವು ಅಭಿವೃದ್ಧಿಯ ಮಗ್ಗುಲಿಗೆ ಹೊರಳುತಿದ್ದು, ಕಳೆದ ಕೆಲ ವರ್ಷ­ಗಳಿಂದೀಚೆಗೆ ಅನೇಕ ಬಹು­ಮಹಡಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ತಲೆಎತ್ತುತ್ತಿವೆ. ಜನಸಂಖ್ಯೆ ಹೆಚ್ಚುತ್ತಿರುವ ಜತೆಗೆ ಅಪರಾಧ ಕೃತ್ಯಗಳು ತುಸು ಅಧಿಕ ವಾಗುತ್ತಿದೆ. ಸರ ಅಪಹರಣ, ದರೋಡೆ, ಮಟ್ಕಾ, ಅಕ್ರಮ ಮದ್ಯ ಸಾಗಣೆ ಹಾಗೂ ಗಾಂಜಾ ಮಾರಾಟ ದಂಧೆಯಂಥ ಪ್ರಕರಣಗಳು ನಗರ ಠಾಣೆಯಲ್ಲಿ ದಾಖ­ಲಾಗುತ್ತಿವೆ. ಇವುಗ­ಳನ್ನು ತಡೆಗಟ್ಟಲು ಹಾಗೂ ಆರೋಪಿ­ಗಳನ್ನು ಪತ್ತೆ ಹಚ್ಚಲು ಈ ಸಿ.ಸಿ. ಟಿ.ವಿ. ಕ್ಯಾಮೆರಾಗಳು ಪೊಲೀಸರ ನೆರವಿಗೆ ಬರಲಿದೆ.

ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ:
ಸೀಬರ್ಡ್‌ ನೌಕಾನೆಲೆ ಹಾಗೂ ಕೈಗಾ ಅಣು ವಿದ್ಯುತ್‌ ಸ್ಥಾವರ ಕಾರವಾರ ತಾಲ್ಲೂಕಿನ ವ್ಯಾಪ್ತಿಯಲ್ಲೇ ಇದ್ದು, ಭದ್ರತೆ ದೃಷ್ಟಿಯಿಂದ ಮೈಯೆಲ್ಲ ಕಣ್ಣಾಗಿರುವುದು ಅನಿವಾರ್ಯ. ಹೀಗಾಗಿ ನಗರಕ್ಕೆ ಬರುವ ಅನುಮಾನಾಸ್ಪದ ವ್ಯಕ್ತಿಗಳ ಚಲನ­ವಲನಗಳ ಮೇಲೆ ನಿಗಾ ವಹಿಸುವುದು ತುಂಬಾ ಅವಶ್ಯ. ಈ ನಿಟ್ಟಿನಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾಗಳು ಪೊಲೀಸರಿಗೆ ಪ್ರಯೋಜನಕಾರಿಯಾಗಲಿದೆ.

ಅಳವಡಿಕೆ ಏಲ್ಲೆಲ್ಲಿ?:
ನಗರದ ಬಿಲ್ಟ್‌ ವೃತ್ತ, ಸುಭಾಷ್‌ ವೃತ್ತ, ಶಿವಾಜಿ ವೃತ್ತ, ಮಾರುಕಟ್ಟೆ ಪ್ರದೇಶ, ಕೇಂದ್ರ ಬಸ್‌ ನಿಲ್ದಾಣ, ಕೋಡಿಬಾಗ ಮುಂತಾದ ಆಯಕಟ್ಟಿನ ಸ್ಥಳಗಳಲ್ಲಿ ಇದೇ ಮೊಲದ ಬಾರಿಗೆ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ADVERTISEMENT

‘ಸರ್ಕಾರದಿಂದ ಅತ್ಯಾಧುನಿಕ 15 ಸಿ.ಸಿ. ಟಿ.ವಿ. ಕ್ಯಾಮೆರಾಗಳು ಮಂಜೂ­ರಾಗಿದ್ದು, ನಗರದ ಯಾವ ಸ್ಥಳಗಳಲ್ಲಿ ಹಾಕಬೇಕು ಎಂಬುದರ ಕುರಿತು ಸಮಾಲೋಚನೆ ನಡೆಸಲಾಗಿದೆ. ಆಯ್ದ ಸ್ಥಳಗಳಲ್ಲಿ ಇವುಗಳು ಶೀಘ್ರದಲ್ಲಿಯೇ ಅಳವಡಿಕೆಯಾಗಲಿವೆ. ಅಪರಾಧ ಕೃತ್ಯಗಳು ನಡೆದ ಸಂದರ್ಭದಲ್ಲಿ ಆರೋ­ಪಿ­ಗಳನ್ನು ಪತ್ತೆಹಚ್ಚಲು ಹಾಗೂ ಅವ­ರನ್ನು ಗುರುತಿಸಿ, ನಾಕಾಬಂದಿ ಮಾಡಲು ಈ ಕ್ಯಾಮೆರಾಗಳು ಸಹಕಾರಿಯಾಗಲಿದೆ. ಈ ಕ್ಯಾಮೆರಾ­ಗಳನ್ನು ಎಸ್ಪಿ ಕಚೇರಿಯಿಂದ ನಿಯಂತ್ರಿಸಲಾಗುವುದು’ ಎಂದು ಎಸ್ಪಿ ವಿನಾಯಕ ವಿ.ಪಾಟೀಲ  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.