ADVERTISEMENT

ಕಾರವಾರದಲ್ಲಿ ನೀರಸ ಮತದಾನ

ಚುನಾವಣೆ: ಮತಗಟ್ಟೆಗಳಿಗೆ ತೆರಳದ ಮತದಾರರು,ಶಾಂತಿಯುತ ಮತದಾನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 6:36 IST
Last Updated 13 ಜನವರಿ 2017, 6:36 IST
ವೃದ್ಧರೊಬ್ಬರು ಮತದಾನ ಮಾಡಿ ಮತಗಟ್ಟೆಯಿಂದ ಹೊರಬರುತ್ತಿರುವುದು (ಎಡಚಿತ್ರ). ಯಲ್ಲಾಪುರ ತಾಲ್ಲೂಕಿನ  ಎಪಿಎಂಸಿಗೆ ನಡೆದ ಚುನಾವಣೆಯಲ್ಲಿ ಅರಬೈಲ್ ಮತಗಟ್ಟೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮತ ಚಲಾಯಿಸಿದರು.
ವೃದ್ಧರೊಬ್ಬರು ಮತದಾನ ಮಾಡಿ ಮತಗಟ್ಟೆಯಿಂದ ಹೊರಬರುತ್ತಿರುವುದು (ಎಡಚಿತ್ರ). ಯಲ್ಲಾಪುರ ತಾಲ್ಲೂಕಿನ ಎಪಿಎಂಸಿಗೆ ನಡೆದ ಚುನಾವಣೆಯಲ್ಲಿ ಅರಬೈಲ್ ಮತಗಟ್ಟೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮತ ಚಲಾಯಿಸಿದರು.   
ಕಾರವಾರ: ಜಿಲ್ಲೆಯ ಆರು ಎಪಿಎಂಸಿಗಳಿಗೆ ಗುರುವಾರ ಮತದಾನ ಶಾಂತಿಯುತವಾಗಿ ನಡೆಯಿತು. ಕಾರವಾರ ತಾಲ್ಲೂಕಿನಲ್ಲಿ ಕೇವಲ ಶೇ 9.02 ಮತದಾನ ಆಗಿ ನೀರಸ ಎನಿಸಿತು.
 
ಕಾರವಾರ-, ಕುಮಟಾ-, ಹೊನ್ನಾವರ, ಹಳಿಯಾಳ, ಸಿದ್ದಾಪುರ ಹಾಗೂ ಯಲ್ಲಾಪುರ ಎಪಿಎಂಸಿಗಳ ಒಟ್ಟು 56 ಕ್ಷೇತ್ರಗಳಿಗೆ 137 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಿಗದಿತ ಮತಗಟ್ಟೆಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 5ರತನಕ ಮತದಾನ ನಡೆಯಿತು. 
 
ಕಾರವಾರ ತಾಲ್ಲೂಕಿನಲ್ಲಿ 43,270 ಪುರುಷರು, 24,128 ಮಹಿಳೆಯರು ಸೇರಿದಂತೆ ಒಟ್ಟು 67,398 ಮತದಾರರಿದ್ದರು. ಆದರೆ 4,403 ಪುರುಷರು, 1,679 ಮಹಿಳೆಯರು ಸೇರಿ ಒಟ್ಟು 6,082 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ. ಇದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದ್ದು, ಚುನಾವಣೆಗೆ ಜನರು ನಿರಾಸಕ್ತಿ ತೋರಿಸಿದ್ದಾರೆ. ಕಾರವಾರ ಎಪಿಎಂಸಿಯಲ್ಲಿ ಒಟ್ಟು ಒಟ್ಟೂ 13 ಕ್ಷೇತ್ರಗಳಿದ್ದು, 5 ಕ್ಷೇತ್ರಕ್ಕೆ ಅವಿರೋಧ ಆಯ್ಕೆಯಾಗಿದೆ. 8 ಕ್ಷೇತ್ರಕ್ಕೆ ಮತದಾನ ನಡೆದಿದೆ. ಯಲ್ಲಾಪುರದಲ್ಲಿ ಶೇ 50, ಹೊನ್ನಾವರದಲ್ಲಿ ಶೇ 27 ರಷ್ಟು ಮತದಾನವಾಗಿದೆ. 
 
ಮತದಾನ ಶಾಂತಿಯುತ : ನೀರಸ ಪ್ರತಿಕ್ರಿಯೆ
ಸಿದ್ದಾಪುರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯ ಸದಸ್ಯ ಸ್ಥಾನಗಳಿಗೆ ಗುರುವಾರ ನಡೆದ ಮತದಾನ ಶಾಂತಿಯುತವಾಗಿದ್ದು, ನೀರಸ ಪ್ರತಿಕ್ರಿಯೆ ಕಂಡುಬಂದಿದೆ.
 
  ತಾಲ್ಲೂಕಿನಲ್ಲಿ ಒಟ್ಟು ಶೇ  40.06 ಮತದಾನ ಆಗಿದ್ದು, ತ್ಯಾಗಲಿ ಮತಗಟ್ಟೆಯಲ್ಲಿ ಅತ್ಯಂತ ಕಡಿಮೆ (ಶೇ 24.6)  ಮತ್ತು ಕೋಲಸಿರ್ಸಿ ಮತಗಟ್ಟೆಯಲ್ಲಿ ಅತ್ಯಂತ ಹೆಚ್ಚು (ಶೇ 63.5) ಮತದಾನ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಮತದಾನ ಮಂದಗತಿಯಲ್ಲಿಯೇ ಆರಂಭಗೊಂಡು, ಮಂದಗತಿಯಲ್ಲಿಯೇ ನಡೆಯಿತು. ಬೆಳಗಿನ ಅವಧಿಯಲ್ಲಂತೂ ಬಹುತೇಕ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ಸಾಕಷ್ಟು ಕಡಿಮೆ ಇತ್ತು.
 
ಶೇ 56.62 ರಷ್ಟು ಮತದಾನ
ಯಲ್ಲಾಪುರ: ತಾಲ್ಲೂಕಿನಲ್ಲಿ ಎಪಿಎಂಸಿ ಚುನಾವಣೆಗೆ ಗುರುವಾರ ಶಾಂತಿಯುತವಾಗಿ ಮತದಾನ ನಡೆಯಿತು. ಮುಂಜಾನೆ ಮಂದಗತಿಯಲ್ಲಿ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ತುಸು ವೇಗ ಪಡೆದುಕೊಂಡಿತು. 
 
ತಾಲ್ಲೂಕಿನಲ್ಲಿ ಶೇ 56.62 ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ. ತಾಲ್ಲೂಕಿನ 38 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 14 ಸ್ಥಾನಗಳಿಗೆ 30 ಜನ ಅಭ್ಯರ್ಥಿಗಳು ಚುನಾವಣೆಯ ಕಣದಲ್ಲಿದ್ದು, ಅದೃಷ್ಟದ ಪರೀಕ್ಷೆ ಬಯಸಿದ್ದಾರೆ.
 
ಗ್ರಾಮೀಣ ಪ್ರದೇಶವಾದ ವಜ್ರಳ್ಳಿಯ ಮತಗಟ್ಟೆಯಲ್ಲಿ 84 ವರ್ಷದ ಹಿರಿಯ ನಾಗರಿಕ ಶಿವರಾಮ ಗಾಂವ್ಕಾರ ಕಂಚಿಮನೆ ಮತ ಚಲಾಯಿಸಿ ಗಮನಸೆಳೆದರು. ಶಾಸಕ ಶಿವರಾಮ ಹೆಬ್ಬಾರ್ ತಾಲ್ಲೂಕಿನ ಅರಬೈಲ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.