ADVERTISEMENT

ಕಾರವಾರದ ಗುಡ್ಡಳ್ಳಿಗೆ ಚಾರಣ ಪ್ಯಾಕೇಜ್

ಜಿಲ್ಲೆಯಲ್ಲಿ ಜಲಸಾಹಸ ಪ್ರವಾಸೋದ್ಯಮಕ್ಕೆ ಒತ್ತು: ಸಚಿವರಿಂದ ಕರಪತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 10:31 IST
Last Updated 28 ಜನವರಿ 2017, 10:31 IST
ಕಾರವಾರದ ಗುಡ್ಡಳ್ಳಿಗೆ ಚಾರಣ ಪ್ಯಾಕೇಜ್
ಕಾರವಾರದ ಗುಡ್ಡಳ್ಳಿಗೆ ಚಾರಣ ಪ್ಯಾಕೇಜ್   

ಕಾರವಾರ: ಜಿಲ್ಲೆಯಲ್ಲಿ ಜಲಸಾಹಸ ಪ್ರವಾಸೋದ್ಯಮಕ್ಕೆ ಈಗಾಗಲೇ ಒತ್ತು ನೀಡಿರುವ ಜಿಲ್ಲಾಡಳಿತ ಇದೀಗ ನಿಸರ್ಗದತ್ತ ಪ್ರವಾಸಿಗರನ್ನು ಆಕರ್ಷಿಸಲು ಚಾರಣ ಪ್ರವಾಸೋದ್ಯಮಕ್ಕೆ ಚಾಲನೆ ನೀಡಿದೆ.

ಕಾರವಾರ ನಗರಸಭೆ ವ್ಯಾಪ್ತಿಯಲ್ಲಿರುವ ಸುಂದರ ನಿಸರ್ಗ ತಾಣ ಗುಡ್ಡಳ್ಳಿಗೆ ಟ್ರಕ್ಕಿಂಗ್ ಪ್ಯಾಕೇಜ್ ಆರಂಭಿಸಲಾಗಿದ್ದು, ಈ ಕುರಿತಾದ ಮಾಹಿತಿಯನ್ನು ಒಳಗೊಂಡ ಕರಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಗುರುವಾರ ಬಿಡುಗಡೆ ಮಾಡಿದರು.

ಕಾರವಾರ ನಗರದಿಂದ 6 ಕಿ.ಮೀ ದೂರದಲ್ಲಿರುವ ಗುಡ್ಡಳ್ಳಿ ರಮಣೀಯ ನಿಸರ್ಗ ಚೆಲುವನ್ನು ಹೊಂದಿದ್ದು, ಚಾರಣಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಕಾರವಾರ ನಗರ ವ್ಯಾಪ್ತಿಯಲ್ಲಿರುವ ಗುಡ್ಡಳ್ಳಿಗೆ ಚಾರಣ ಕೈಗೊಳ್ಳಲು ಎರಡು ರೀತಿಯ ಪ್ಯಾಕೇಜ್ ಆರಂಭಿಸಲಾಗಿದೆ. ಬೆಳಿಗ್ಗೆ ಗುಡ್ಡಳ್ಳಿಗೆ ಚಾರಣ ಕೈಗೊಂಡು ಸಂಜೆ ಮರಳಿ ಕಾರವಾರಕ್ಕೆ ಬರುವುದು, ಇನ್ನೊಂದು ಬೆಳಗ್ಗಿನ ಚಾರಣದ ಬಳಿಕ ರಾತ್ರಿ ಗುಡ್ಡಳ್ಳಿಯಲ್ಲಿ ತಂಗುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಗುಡ್ಡಳ್ಳಿಯಲ್ಲಿರುವ ಹಾಲಕ್ಕಿ ಒಕ್ಕಲಿಗರ ಸಂಸ್ಕೃತಿ, ಆಹಾರ ಪದ್ಧತಿಯನ್ನು ಪರಿಚಯಿಸುವ ಕಾರ್ಯವನ್ನು ಸಹ ಚಾರಣಿಗರಿಗೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಜಲಸಾಹಸ ಕ್ರೀಡೆಗೆ ಒತ್ತು: ಜಿಲ್ಲಾಡಳಿತದ ವತಿಯಿಂದ ಇತ್ತೀಚಿನ ದಿನಗಳಲ್ಲಿ ಆರಂಭಿಸಲಾಗಿರುವ ಜಲಸಾಹಸ ಕ್ರೀಡೆಗಳ ಕುರಿತ ಮಾಹಿತಿಯನ್ನು ಕರಪತ್ರದಲ್ಲಿ ಒದಗಿಸಲಾಗಿದೆ. ನೇತ್ರಾಣಿಯಲ್ಲಿ ಆರಂಭಿಸಲಾಗಿರುವ ಸ್ಕೂಬಾ ಡೈವಿಂಗ್, ಕಾರವಾರ ರವೀಂದ್ರನಾಥ ಕಡಲತೀರ  ಸೇರಿದಂತೆ ಪ್ರಮುಖ ಕಡಲತೀರಗಳಲ್ಲಿ ಆರಂಭಿಸಲಾಗಿರುವ ಜಲಸಾಹಸ ಕ್ರೀಡೆಗಳು, ಪ್ಯಾರಾ ಸೇಲಿಂಗ್, ಪ್ಯಾರಾ ಮೋಟಾರ್ ಚಟುವಟಿಕೆಗಳ ಸಚಿತ್ರ ಮಾಹಿತಿಗಳು ಇದರಲ್ಲಿವೆ.

‘ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾಡಳಿತ ವತಿಯಿಂದ ಎಲ್ಲ  ಸಹಕಾರ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ   ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಎಲ್ಲರ ಸಹಕಾರ   ಅಗತ್ಯವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.