ADVERTISEMENT

ಕಾರ್ಯಕರ್ತರ ಹತ್ಯೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 12:09 IST
Last Updated 20 ಜುಲೈ 2017, 12:09 IST
ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಾರವಾರ: ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಉಡುಪಿ, ದಕ್ಷಿಣ ಕನ್ನಡದಲ್ಲಿ ನಡೆದ ಕಾರ್ಯಕರ್ತರ ಹತ್ಯೆಗಳ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ. ಮುಸಲ್ಮಾನರ ಓಲೈಕೆಗಾಗಿ ಈ ಹತ್ಯೆಗಳನ್ನು ನಡೆಸಲಾಗಿದೆ. ನವೀನ್ ಪೂಜಾರಿ, ಶರತ್ ಮಡಿವಾಳ ಒಳಗೊಂಡು ನಡೆದ ಎಲ್ಲ ಹತ್ಯೆಗಳಲ್ಲೂ ತರಬೇತಿ ಹೊಂದಿದ ಕಿಲ್ಲರ್‌ಗಳನ್ನು ಬಳಸಿಕೊಳ್ಳಲಾಗಿದೆ’ ಎಂದು ಉಡುಪಿ ಬಿಜೆಪಿ ಮುಖಂಡ ಆರೋಪಿಸಿದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಪ್ರಚೋದಿ ಘಟನೆಗಳಿಗೆ ಪಿಎಫ್‍ಐ ಮತ್ತು ಕೆಡಿಎಫ್ ಸಂಘಟನೆಗಳು ಕಾರಣವಾಗಿವೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದರೆ ಇವುಗಳನ್ನು ನಿಷೇಧಿಸಬೇಕು.

ADVERTISEMENT

ಸಚಿವ ರಮಾನಾಥ ರೈ ಅವರು ಬಿಜೆಪಿ ಮೇಲೆ ಗೂಬೆ ಕೂರಿಸುವ ಬದಲು ಎನ್‍ಐಎಗೆ ತನಿಖೆ ನಡೆಸುವಂತೆ ಆದೇಶಿಸಲಿ’ ಎಂದು ಸವಾಲು ಹಾಕಿದರು.

ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಹೆಗಡೆ ಮಾತನಾಡಿ, ‘ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮಹಿಳಾ ಅಧಿಕಾರಿಯೊಬ್ಬರು ಅವ್ಯವಹಾರ ಬಯಲು ಮಾಡಿದರೆ ಅವರನ್ನು ಗೌರವಿಸುವ ಬದಲು ದಂಡಿಸುವ ನೀಚ ಸಂಸ್ಕೃತಿ ಕಾಂಗ್ರೆಸ್ ಆಡಳಿತದಲ್ಲಿದೆ’ ಎಂದು ಕಿಡಿಕಾರಿದರು.

ಅಧಿಕಾರಿಗಳನ್ನು ಬೆದರಿಸುವುದು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ಯೆ ಮಾಡುವುದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ  ಸೇರಿದಂತಿದೆ. ಹಿಂದೂ ಸಂಘಟನೆಗಳಲ್ಲಿ ಗುರುತಿಸಿ ಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 24 ಮಂದಿಯನ್ನು ಹತ್ಯೆ ಮಾಡಲಾಗಿದೆ. ಇದೇ ರೀತಿ ಮುಂದುವರೆದರೆ ರಾಜ್ಯದ ಜನರು ಭಯಭೀತಿಯಿಂದ ಓಡಾಡುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಹೇಳಿದರು.

ಮುಖಂಡರಾದ ನಾಗರಾಜ ಜೋಶಿ, ಗಂಗಾಧರ ಭಟ್, ಎಸ್.ಎನ್.ಹೆಗಡೆ, ನಂದು ಗಾಂವಕರ, ಬಿ.ಜಿ.ಮೋಹನ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.