ADVERTISEMENT

ಕೊಳೆರೋಗ ನಿಯಂತ್ರಣಕ್ಕೆ ನೂತನ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 5:36 IST
Last Updated 16 ಸೆಪ್ಟೆಂಬರ್ 2017, 5:36 IST
ಶಿರಸಿ ತಾಲ್ಲೂಕಿನ ಅಡಿಕೆ ತೋಟದಲ್ಲಿ ಬೆಳೆದಿರುವ ಕಾಳುಮೆಣಸು ಬಳ್ಳಿ (ಸಾಂದರ್ಭಿಕ ಚಿತ್ರ)
ಶಿರಸಿ ತಾಲ್ಲೂಕಿನ ಅಡಿಕೆ ತೋಟದಲ್ಲಿ ಬೆಳೆದಿರುವ ಕಾಳುಮೆಣಸು ಬಳ್ಳಿ (ಸಾಂದರ್ಭಿಕ ಚಿತ್ರ)   

ಶಿರಸಿ: ಕಾಳುಮೆಣಸಿಗೆ ಕಾಡುವ ಕೊಳೆರೋಗ ನಿಯಂತ್ರಿಸಲು ತಾಲ್ಲೂಕಿನ ಹೆಗಡೆಕಟ್ಟಾದ ರೈತ ಸುಬ್ರಹ್ಮಣ್ಯ ಹೆಗಡೆ ಸುಲಭ ಉಪಾಯ ಕಂಡುಕೊಂಡಿದ್ದಾರೆ. ಸತತ ಮೂರು ವರ್ಷಗಳಿಂದ ಅವರು ತೋಟದಲ್ಲಿ ಈ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ.

‘ಕಾಳುಮೆಣಸಿಗೆ ಕೊಳೆರೋಗ ಬಂದರೆ ಮೆಟಲಾಕ್ಸಿಲ್ ಜೊತೆಗೆ ಮ್ಯಾಂಕೊಜೆಬ್ ಔಷಧ ಸೇರಿಸಿ ರೈತರು ಸಿಂಪರಣೆ ಮಾಡುತ್ತಾರೆ. ಇದರಿಂದ ರೋಗ ನಿಯಂತ್ರಣಕ್ಕೆ ಬಂದರೂ ಮತ್ತೆ ಆರಂಭವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಒಂದು ವಾರದ ನಂತರ ಮತ್ತೆ ಬೊರ್ಡೊ ದ್ರಾವಣ ಸಿಂಪರಣೆ ಮಾಡಬೇಕಾಗುತ್ತದೆ.

ಈ ಔಷಧ ಸಂಯೋಜನೆಯನ್ನು ಬದಲಾಯಿಸಿ ಮೆಟಲಾಕ್ಸಿಲ್ ಜೊತೆಗೆ ಕಾಪರ್ ಆಕ್ಸಿ ಕ್ಲೋರೈಡ್ ಅನ್ನು ನಿರ್ದಿಷ್ಟ ಅನುಪಾ ತದಲ್ಲಿ ಬಳಸಿ ಕೊಳೆರೋಗ ಬಾಧಿತ ಕಾಳುಮೆಣಸು ಬಳ್ಳಿಗೆ ಸಿಂಪರಣೆ ಮಾಡಿದರೆ ಒಂದು ವಾರದ ಅವಧಿ ಯಲ್ಲಿ ಬೋರ್ಡೊ ಹೊಡೆಯಬೇಕಾಗಿಲ್ಲ’ ಎನ್ನುತ್ತಾರೆ ಸುಬ್ರಹ್ಮಣ್ಯ ಹೆಗಡೆಕಟ್ಟಾ.

ADVERTISEMENT

‘ಔಷಧಗಳನ್ನು ಬಿಡಿಯಾಗಿ ಬಳಸುವುದರಿಂದ ಶೇ 40ರಷ್ಟು ವೆಚ್ಚ ಉಳಿತಾಯವಾಗಿದೆ. 100 ಲೀಟರ್ ನೀರಿಗೆ ಮೆಟಲಾಕ್ಸಿಲ್ ಮೂಲವಾಗಿ ಟ್ರಂಪೆಟ್‌ ಅನ್ನು 80 ಗ್ರಾಂ ಮತ್ತು ಕಾಪರ್ ಆಕ್ಸಿಕ್ಲೋರೈಡ್ ಮೂಲವಾಗಿ ಬ್ಲೈಟೆಕ್ಸ್‌ ಅನ್ನು 200 ಗ್ರಾಂ ಸೇರಿಸಿ ಮಾಡಿದ ದ್ರಾವಣವನ್ನು ರೋಗ ಆರಂಭವಾದ ತಕ್ಷಣ ಕಾಳುಮೆಣಸು ಬಳ್ಳಿಗೆ ಸಿಂಪಡಿಸಬೇಕು ಮತ್ತು ಬುಡದಲ್ಲಿ ಔಷಧದಿಂದ ನೆನೆಸಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ’ ಎಂಬುದು ಅವರ ಅಭಿಪ್ರಾಯ.

’ಕಾಳುಮೆಣಸು ಬಳ್ಳಿಗೆ ರೋಗ ಬರುವ ಪೂರ್ವದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವರ್ಷಕ್ಕೆ ಎರಡು ಬಾರಿ ಶೇ 0.67 ಬೋರ್ಡೊ ದ್ರಾವಣವನ್ನು (150 ಲೀಟರ್ ನೀರಿಗೆ 1 ಕೆ.ಜಿ ಮೈಲುತುತ್ತ ಮತ್ತು 1 ಕೆ.ಜಿ ಸುಣ್ಣದ ಪೌಡರ್‌ ಸೇರಿಸಿದ ದ್ರಾವಣ) ಸಿಂಪರಣೆ ಮಾಡಬೇಕು. ಪ್ರಚಲಿತದಲ್ಲಿರುವ ಶೇ 1ರ ಬೋರ್ಡೊ ದ್ರಾವಣ ಸಿಂಪಡಿಸುವ ವಿಧಾನಕ್ಕೆ ಹೋಲಿಸಿದಾಗ ಈ ವಿಧಾನದಿಂದ ಶೇ 33 ಹಣ ಉಳಿತಾಯವಾಗುತ್ತದೆ ಜೊತೆಗೆ ಶೇ 33ರಷ್ಟು ಹೆಚ್ಚಿನ ತಾಮ್ರದ ಅಂಶ ಭೂಮಿ ಸೇರುವುದು ಕಡಿಮೆ ಯಾಗುತ್ತದೆ’ ಎಂಬುದು ಅವರು ನೀಡುವ ಸಲಹೆ.

* * 

ಕಾಳುಮೆಣಸಿಗೆ ಸಿಂಪರಣೆ ಮಾಡುವ ಔಷಧ ಸಂಯೋಜನೆಯ ಬದಲಾವಣೆಯು ಉತ್ತಮ ಫಲಿತಾಂಶ ನೀಡಿದೆ.
ಸುಬ್ರಹ್ಮಣ್ಯ ಹೆಗಡೆಕಟ್ಟಾ
ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.