ADVERTISEMENT

ಗ್ರಾಮ ಲೆಕ್ಕಿಗರಿಗೆ ‘ಕಂದಾಯ ಗ್ರಂಥಾಲಯ’

ಸಂಧ್ಯಾ ಹೆಗಡೆ
Published 9 ಸೆಪ್ಟೆಂಬರ್ 2017, 6:32 IST
Last Updated 9 ಸೆಪ್ಟೆಂಬರ್ 2017, 6:32 IST

ಶಿರಸಿ: ಕಂದಾಯ ಇಲಾಖೆಯ ಬೆನ್ನೆಲುಬಾಗಿರುವ ಗ್ರಾಮ ಲೆಕ್ಕಗರಿಗೆ ಕಾನೂನು ಜ್ಞಾನ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ 11 ತಹಶೀಲ್ದಾರ್ ಕಾರ್ಯಾಲಯಗಳಲ್ಲಿ ಕಂದಾಯ ಗ್ರಂಥಾಲಯ ಪ್ರಾರಂಭವಾಗಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ಈ ಗ್ರಂಥಾಲಯ ಪ್ರಾರಂಭಿಸಿದ ಹೆಗ್ಗಳಿಕೆಗೆ ಉತ್ತರ ಕನ್ನಡ ಜಿಲ್ಲೆ ಪಾತ್ರವಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ ವೇಳೆ ಸಂಗ್ರಹಿಸಿದ್ದ ಮೊತ್ತದಲ್ಲಿ ಅಸ್ತಿತ್ವಕ್ಕೆ ಬಂದಿರುವ ವಾಚನಾಲಯಗಳಲ್ಲಿ 3–4 ಕಂಪ್ಯೂಟರ್‌ಗಳು, ಗ್ರಾಮ ಲೆಕ್ಕಾಧಿಕಾರಿಗಳ ಕೈಪಿಡಿ, ಕರ್ನಾಟಕ ಭೂ ಕಂದಾಯ ಕಾಯ್ದೆ, ಭೂ ಕಂದಾಯ ನಿಯಮಗಳು, ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ಕಾಯ್ದೆ ಪುಸ್ತಕ, ಸಿಆರ್‌ಪಿಸಿ, ಸಿಪಿಸಿ, ಆಸ್ತಿ ಹಕ್ಕು ವರ್ಗಾವಣೆ, ಮಾಹಿತಿ ಹಕ್ಕು ಕಾಯ್ದೆ, ವಕ್ಫ್ ಕಾಯ್ದೆ ಒಳಗೊಂಡು ಸುಮಾರು 20 ಪುಸ್ತಕಗಳು ಇವೆ.

‘ಗ್ರಾಮ ಲೆಕ್ಕಿಗರು ಕಂದಾಯ ಇಲಾಖೆಯ ಆಧಾರಸ್ತಂಭವಿದ್ದಂತೆ. ಅವರಲ್ಲಿ ಕಾನೂನು ಅರಿವಿನ ಕೊರತೆಯಿದ್ದರೆ ಕೆಲಸಗಳು ತ್ವರಿತವಾಗಿ ನಡೆಯುವುದಿಲ್ಲ. ಈ ಕಾರಣಕ್ಕೆ  ಅವರಿಗೆ ಪ್ರತಿ ತಿಂಗಳ ಎರಡನೇ ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಕಂದಾಯ ಕಾಯ್ದೆಗಳ ಬಗ್ಗೆ ತರಬೇತಿ ನೀಡುವ ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಿದ್ದೇವೆ.

ADVERTISEMENT

ಈ ತರಬೇತಿಯ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರಿಗೆ ದೈನಂದಿನ ಚಟುವಟಿಕೆಗಳಿಗೆ ಅವಶ್ಯವಾಗಿ ಬೇಕಾಗುವ ಪುಸ್ತಕಗಳು ಒಂದೇ ಸ್ಥಳದಲ್ಲಿ ಲಭ್ಯವಿಲ್ಲದಿರುವ ವಿಷಯ ಗಮನಕ್ಕೆ ಬಂತು. ಆಗ ಕಂದಾಯ ವಾಚನಾಲಯ ಪ್ರಾರಂಭಿಸುವ ಯೋಜನೆ ಮಾಡಿದೆವು’ ಎನ್ನುತ್ತಾರೆ ಯೋಜನೆಯ ರೂವಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್.

‘ತಂತ್ರಜ್ಞಾನ ಯುಗದಲ್ಲಿ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಮಾಹಿತಿ ಲಭ್ಯವಾಗುವುದರಿಂದ ವಾಚನಾಲ ಯದಲ್ಲಿ ಪುಸ್ತಕಗಳ ಜೊತೆಗೆ ಕಂಪ್ಯೂಟರ್ ಸೌಲಭ್ಯ ಒದಗಿಸಿದ್ದೇವೆ. ಕಲಿಕೆ ಮತ್ತು ಕೆಲಸಕ್ಕೆ ಪ್ರತ್ಯೇಕ ಸ್ಥಳ ನಿಗದಿಗೊಳಿಸಿರುವುದರಿಂದ ಸಾಕಷ್ಟು ಅನುಕೂಲವಾಗಿದೆ ಎಂಬ ಅಭಿಪ್ರಾಯ ಗ್ರಾಮ ಲೆಕ್ಕಿಗರಿಂದ ವ್ಯಕ್ತವಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ವಿವಿಧ ಯೋಜನೆಗಳ ಅನುಷ್ಠಾನ ಸಂಬಂಧ ಡಾಟಾ ನೋಂದಣಿ, ಪಡಿತರ ಚೀಟಿ, ಜನನ– ಮರಣ, ಒಟಿಸಿ, ಪಹಣಿ ತಿದ್ದುಪಡಿ ಕೆಲಸಗಳಿಗೆ ಕಂಪ್ಯೂಟರ್‌ಗಳ ಅಗತ್ಯ ಇರುತ್ತದೆ. ಗ್ರಂಥಾಲಯದಲ್ಲಿ ಒದಗಿಸಿರುವ ಈ ಸೌಕರ್ಯವು ಗ್ರಾಮ ಲೆಕ್ಕಿಗರಲ್ಲಿ ಅಧ್ಯಯನದೊಂದಿಗೆ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿಯಾಗಿದೆ’ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಪ್ರಸನ್ನ.

* * 

ಕಂದಾಯ ಗ್ರಂಥಾಲಯಗಳಿಗೆ ಇನ್ನೂ ಕೆಲವು ಕಾಯ್ದೆ ಪುಸ್ತಕಗಳನ್ನು ಒದಗಿಸುವಂತೆ ಗ್ರಾಮ ಲೆಕ್ಕಿಗರು ಬೇಡಿಕೆ ಇಟ್ಟಿದ್ದು, ಬರುವ ದಿನಗಳಲ್ಲಿ ಪೂರೈಸಲಾಗುವುದು
ಎಸ್.ಎಸ್. ನಕುಲ್
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.