ADVERTISEMENT

ಜನೌಷಧ ಕೇಂದ್ರ ವಿಳಂಬ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 10:59 IST
Last Updated 16 ಏಪ್ರಿಲ್ 2017, 10:59 IST


ಶಿರಸಿ: ಕೇಂದ್ರ ಸರ್ಕಾರದ ಮಹತ್ವಾ­ಕಾಂಕ್ಷೆಯ ಜನೌಷಧ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳು ಮುಂದೆ ಬಂದರೆ ಅವಕಾಶ ನೀಡಲಾಗುವುದು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

ಕದಂಬ ಫೌಂಡೇಷನ್ ಶನಿವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನೌಷಧ ಕೇಂದ್ರಕ್ಕೆ ಕೇಂದ್ರ ಸರ್ಕಾರವೇ ರಿಯಾ­ಯಿತಿ ದರದಲ್ಲಿ ಔಷಧ ಪೂರೈಕೆ ಮಾಡುತ್ತದೆ. ಬಿ ಫಾರ್ಮಾ ಪದ­ವೀ­ಧರರು ಮುಂದೆ ಬರಬಹುದು ಎಂದರು.

‘ಮದ್ಯ ಮಾರಾಟ ಮಾಡುವ ಎಂ.ಎಸ್.ಐ.ಎಲ್‌. ಸಂಸ್ಥೆಗೆ ಜನೌಷಧಿ ಕೇಂದ್ರವನ್ನು ಉಸ್ತುವಾರಿ ನೀಡಿರುವ ರಾಜ್ಯ ಸರ್ಕಾರ ಬಡಜನರಿಗೆ ಅನ್ಯಾಯ ಮಾಡುತ್ತಿದೆ. ಕೇಂದ್ರ ಸರ್ಕಾರ ಔಷಧ ಕೇಂದ್ರ ಸ್ಥಾಪನೆಗೆ ಸೂಚನೆ ನೀಡಿದ್ದರೂ ರಾಜ್ಯದಲ್ಲಿ ವಿಳಂಬವಾಗಲು ಕಾಂಗ್ರೆಸ್‌ನ ಜನವಿರೋಧಿ ನಡೆ ಕಾರಣವಾಗಿದೆ. ಮಾರುಕಟ್ಟೆಯಲ್ಲಿ ₹ 100 ಮೌಲ್ಯದ ಔಷಧ, ಮಾತ್ರೆಗಳನ್ನು ಕೇವಲ ₹ 2 ದರದಲ್ಲಿ ನೀಡುವ ಜನೌಷಧ ಕೇಂದ್ರ ಅನೇಕ ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‌ ಸರ್ಕಾರ ಮದ್ಯ ಮಾರಾಟ ಮಾಡುವ ಎಂಎಸ್ಐಎಲ್‌ಗೆ ಈ ಕೇಂದ್ರದ ಜವಾಬ್ದಾರಿ ನೀಡಿದೆ. ಈ ಕುರಿತು ಆರೋಗ್ಯ ಇಲಾಖೆ ಆಯುಕ್ತರ ಜೊತೆಗೆ ಮಾತನಾಡಿದ್ದೇನೆ’ ಎಂದರು.

ADVERTISEMENT

ಕೆ.ಎಸ್‌. ಹೆಗ್ಡೆ ಮೆಡಿಕಲ್ ಅಕಾ­ಡೆಮಿಯ ಡೀನ್ ಡಾ. ಸತೀಶಕುಮಾರ ಭಂಡಾರಿ ಮಾತನಾಡಿ ‘ಕೆ.ಎಸ್.ಹೆಗ್ಡೆ ಆಸ್ಪತ್ರೆ ರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವುದಲ್ಲದೇ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಶಿರಸಿಯ ಖಾಸಗಿ ಆಸ್ಪತೆಗಳಿಗೆ ಪೈಪೋಟಿ ನೀಡುವುದು ನಮ್ಮ ಉದ್ದೇಶವಲ್ಲ. ಇಲ್ಲಿಯ ರೋಗಿಗಳಿಗೆ ಉತ್ತಮ ಸೇವೆ ಸಿಗಲಿ ಎಂಬುದು ನಮ್ಮ ಸದುದ್ದೇಶ­ವಾಗಿದೆ’ ಎಂದರು.

ಭವಿಷ್ಯದಲ್ಲಿ ಶಿರಸಿ­ಯಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಶಾಖೆ ಪ್ರಾರಂಭಿಸಿ ಸುತ್ತಲಿನ ಊರುಗಳಿಂದ ಆಸ್ಪತ್ರೆಗೆ ಬರುವ ರೋಗಿಗಳು ಮತ್ತವರ ಸಂಬಂಧಿಗಳಿಗೆ ಶೌಚಾಲಯ, ಅತ್ಯಂತ ಕಡಿಮೆ ದರದಲ್ಲಿ ಬೆಡ್ ವ್ಯವಸ್ಥೆ ಮಾಡಿ ಮಲಗಲು ಅವಕಾಶ ಕಲ್ಪಿಸಲಾಗುವುದು. ಶಿರಸಿಯಲ್ಲಿ ಆಸ್ಪತ್ರೆಯ ಶಾಖೆ ಆರಂಭಿ­ಸಬೇಕು ಎಂಬ ಒತ್ತಡ ಇದೆಯಾದರೂ ವೈದ್ಯರ ಕೊರತೆಯಿಂದ ವಿಳಂಬ­ವಾಗುತ್ತಿದೆ’ ಎಂದರು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಗೌಡ, ಗೋಪಾಲ ಶೆಟ್ಟಿ, ನಾಗರಾಜ ಮಾಳಂಜಿ, ಕೆ.ಆರ್.ಮುಕುಂದನ್ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.