ADVERTISEMENT

ಜಿಎಸ್‌ಟಿ: ತಪ್ಪು ಕಲ್ಪನೆ ನಿವಾರಿಸಿ

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಅನಂತ ಕುಮಾರ ಹೆಗಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 11:23 IST
Last Updated 10 ಜುಲೈ 2017, 11:23 IST

ಭಟ್ಕಳ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಜಿಎಸ್‌ಟಿ ಬಗ್ಗೆ ತಿಳಿದುಕೊಂಡು ಜನರಲ್ಲಿರುವ ತಪ್ಪು ಕಲ್ಪನೆ ನಿವಾರಿಸಲು ಮುಂದಾಗಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಇಲ್ಲಿನ ಆಸರಕೇರಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಈಚೆಗೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಜಿಎಸ್‌ಟಿ ಬಗ್ಗೆ ಜನರಲ್ಲಿ ವಿರೋಧ ಪಕ್ಷಗಳು ತಪ್ಪು ಕಲ್ಪನೆಯನ್ನು ಮೂಡಿಸುತ್ತಿವೆ. ಆದರೆ, ದೇಶದಲ್ಲಿ ಜಿಎಸ್‌ಟಿ ಜಾರಿಯಾದ ನಂತರದಲ್ಲಿ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಿದೆ. ಬ್ರ್ಯಾಂಡೆಡ್ ಸಾಮಗ್ರಿಗಳ ದರ ಸಹಜ­ವಾಗಿ ಏರಿಕೆ ಕಂಡಿವೆ. ಕೇಂದ್ರ ಸರ್ಕಾರ ದೇಶದಲ್ಲಿ ಏಕರೂಪದ ತೆರಿಗೆ ಜಾರಿ­ಗೊಳಿಸುವುದರ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ ಎಂದರು.

ADVERTISEMENT

ರಾಜಕಾರಣ ಮತ್ತು ಚುನಾವಣೆಗಳು ಯಾವುದೇ ಕಾರಣಕ್ಕೂ  ದಂದೆಯಾಗ­ಬಾರದು. ಕಾರ್ಯಕರ್ತರು ಕೇಂದ್ರದ ಡಿಜಿಟಲ್ ಯೋಜನೆಯನ್ನು ಸದುಪ­ಯೋಗ ಪಡಿಸಿಕೊಳ್ಳುವುದರ ಮೂಲಕ ಜನರಿಗೆ ಅಗತ್ಯ ಸೇವೆ ನೀಡುವಂತಾ­ಗಬೇಕು. ಸಾಮಾಜಿಕ ಜಾಲತಾಣದಲ್ಲೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ ಎಂದರು.

ಮಾಜಿ ಶಾಸಕ ಜೆ. ಡಿ ನಾಯ್ಕ ಮಾತನಾಡಿ, ವಿಸ್ತಾರಕ ಕಾರ್ಯಕ್ರಮ ಅತ್ಯುತ್ತಮವಾಗಿದ್ದು, ಇದರಿಂದ ಕಾರ್ಯ­ಕರ್ತರ ಜೊತೆ ಸಂಪರ್ಕ­ವಿರಿಸಿಕೊಳ್ಳಲು ಸಾಧ್ಯವಾಗುತ್ತದೆ. ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಪಕ್ಷವನ್ನು ಬಲಿಷ್ಠಗೊಳಿಸಲು ಮುಂದಾಗಬೇಕು ಎಂದರು.

ರಾಜ್ಯ ಸಮಿತಿ ಸದಸ್ಯ ಪರಮೇಶ್ವರ ದೇವಾಡಿಗ, ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಳದ ಅಧ್ಯಕ್ಷ ರಾಜೇಶ ನಾಯ್ಕ ಮಾತನಾಡಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ. ಜಿ ನಾಯ್ಕ, ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸಳೆ, ಮುಖಂಡರಾದ ಗೋವಿಂದ ನಾಯ್ಕ, ಈಶ್ವರ ನಾಯ್ಕ, ಸುನೀಲ್ ನಾಯ್ಕ, ವಿನೋದ ನಾಯ್ಕ ರಾಯಲ್‌ಕೇರಿ ತಾಲ್ಲೂಕು ಪಂಚಾಯ್ತಿ ಸದಸ್ಯ ಹನುಮಂತ ನಾಯ್ಕ ಇದ್ದರು.

ಸಭೆಯಲ್ಲಿ ನಿವೃತ್ತ ಸರ್ವೆ ಅಧಿಕಾರಿ ಮಂಜುನಾಥ ಹೆಬ್ಬಾರ, ಕುಂಟವಾಣಿಯ ದಿಗಂಬರ ಭಂಡಾರಿ ಸೇರಿದಂತೆ ಬಿಜೆಪಿಗೆ ಸೇರ್ಪಡೆಯಾದವರನ್ನು ಸಂಸದರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.