ADVERTISEMENT

‘ದಂಪತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ’

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 10:50 IST
Last Updated 16 ನವೆಂಬರ್ 2017, 10:50 IST

ಅಂಕೋಲಾ: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಚಾಲಕ ಮಂಜುನಾಥ ನಾಯಕರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಈ ನಡುವೆ ಮಂಜುನಾಥರ ಪತ್ನಿ ಶಾಂತಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾ ಗ್ರಾಮೀಣ ಯುವ ಹೋರಾಟ ಸಮಿತಿಯ ಅಧ್ಯಕ್ಷ ದೇವರಾಜ ನಾಯಕ ಅವರು ಮಾನವ ಹಕ್ಕು ಆಯೋಗ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ರವಾನಿಸಿದ್ದಾರೆ.

‘ಹೊನ್ನಾವರ ತಾಲ್ಲೂಕಿನ ಪ್ರಮೀಳಾ ಮದ್ಯದ ಅಂಗಡಿಯಲ್ಲಿ ಹಾಡಹಗಲೇ ಮಂಜುನಾಥ ನಾಯಕರನ್ನು ಅಂಗಡಿ ಮಾಲೀಕ, ಆತನ ಪುತ್ರ ಹಾಗೂ ಸಹಚರರು ಸೇರಿ ಅಕ್ಟೋಬರ್ 4ರಂದು ಹತ್ಯೆ ಮಾಡಿದ್ದರು. ಈ ಬಗ್ಗೆ ಅಲ್ಲಿನ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಹತ್ಯೆ ಮಾಡಿದವರು ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ, ಅಪರಾಧಿಗಳು ಯಾರೆಂದು ತಿಳಿದಿದ್ದರೂ ಕೂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸದ ಒಬ್ಬನನ್ನು ಬಂಧಿಸಿದ್ದಾರೆ. ಆ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ’ ಎಂದು ದೂರಿದರು.

‘ಈ ನಡುವೆ ಮೃತನ ಪತ್ನಿ ಶಾಂತಾ ನಾಯಕ ಹಲವು ಬಾರಿ ಅಲ್ಲಿನ ಠಾಣೆಗೆ ತೆರಳಿ ಈ ಪ್ರಕರಣದ ಕುರಿತು ಪೊಲೀಸರನ್ನು ವಿಚಾರಿಸಿದ್ದಾರೆ. ಆದರೆ ಅವರ ಪ್ರಶ್ನೆಗಳಿಗೆ ಉತ್ತರಿಸದೇ, ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಆ ಮೂಲಕ ಕರ್ತವ್ಯ ಲೋಪವೆಸಗಿ ಮಾನವ ಹಕ್ಕನ್ನು ಉಲ್ಲಂಘಿಸಿದ್ದಾರೆ. ಇದರಿಂದ ಮನನೊಂದ ಅವರು, ಇದೇ 12ರಂದು ಅಂಕೋಲಾದ ಮನೆಯಲ್ಲಿ ಡೆತ್‌ನೋಟ್‌ ಬರೆದಿಟ್ಟು, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಪತ್ರದಲ್ಲಿ ‘ನನ್ನ ಗಂಡನ ಸಾವಿಗೆ ಪ್ರಮೀಳಾ ಮದ್ಯದ ಅಂಗಡಿಯವರೇ ಕಾರಣ‘ ಎಂದು ಬರೆದಿದ್ದಾರೆ. ಹೀಗಾಗಿ ಪ್ರಮುಖ ಆರೋಪಿಗಳನ್ನು ಶೀಘ್ರವೇ ಬಂಧಿಸಿ, ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.