ADVERTISEMENT

ದುರಸ್ತಿ ಕಾಣದ ಸಿ.ಸಿ. ಟಿ.ವಿ ಕ್ಯಾಮೆರಾ

ಪಿ.ಕೆ.ರವಿಕುಮಾರ
Published 19 ಜುಲೈ 2017, 8:46 IST
Last Updated 19 ಜುಲೈ 2017, 8:46 IST

ಕಾರವಾರ: ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳು ಕೆಟ್ಟು ಹೋಗಿ ಹಲವು ತಿಂಗಳುಗಳೇ ಕಳೆದಿವೆ. ಈ ಮಾರ್ಗದಲ್ಲಿ ಸಂಚರಿಸುವ ಅನುಮಾನಾಸ್ಪದ ವಾಹನಗಳ ಮೇಲೆ ಕಣ್ಗಾವಲು ಇರಿಸಲು ಹಾಗೂ ತಪಾಸಣಾ ಕಾರ್ಯಕ್ಕೆ ಇದರಿಂದ ಹಿನ್ನಡೆಯಾಗಿದೆ. 

ಕರ್ನಾಟಕ–ಗೋವಾ ಗಡಿಭಾಗದಲ್ಲಿರುವ ಈ ಚೆಕ್‌ಪೋಸ್ಟ್‌ ಚಿತ್ತಾಕುಲ ಪೊಲೀಸ್‌ ಠಾಣೆಯ ಸರಹದ್ದಿನಲ್ಲಿ ಬರುತ್ತದೆ. ಕಳ್ಳ ಸಾಗಾಣಿಕೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಪೊಲೀಸ್‌ ಇಲಾಖೆಯು ಐದು ವರ್ಷಗಳ ಹಿಂದೆ ಈ ಚೆಕ್‌ಪೊಸ್ಟ್‌ನಲ್ಲಿ 6 ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿತ್ತು.

ಕೆಲ ವರ್ಷಗಳ ಬಳಿಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಇನ್ನೆರಡು ಕ್ಯಾಮೆರಾಗಳನ್ನು ಅಳವಡಿಸಿತು. ಆದರೆ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಗಾಳಿ– ಮಳೆಗೆ ಸಿಲುಕಿ ಈ ಕ್ಯಾಮೆರಾಗಳು ಕೆಟ್ಟು ಹೋಗಿವೆ. ಇನ್ನು ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೊ ತುಣಕುಗಳನ್ನು ದಾಖಲಿಸಲು ಇದ್ದ ಲಕ್ಷಾಂತರ ಮೌಲ್ಯದ ಕಂಪ್ಯೂಟರ್‌ ಹಾಗೂ ಅಗತ್ಯ ಸಾಧನಗಳು ನಿರ್ವಹಣೆ ಇಲ್ಲದೇ ಮೂಲೆಗುಂಪಾಗಿದೆ. ಹೀಗಿದ್ದರೂ ಪೊಲೀಸ್‌ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ADVERTISEMENT

ಈ ಗಡಿಯಲ್ಲಿ ಸಂಯುಕ್ತ ಪೊಲೀಸ್‌ ಠಾಣಾ ವ್ಯವಸ್ಥೆ ಇದೆ. ಪೊಲೀಸ್‌, ಅರಣ್ಯ, ಅಬಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಬಕಾರಿ ಇಲಾಖೆಗೆ ಕಟ್ಟಡವಿದೆ. ಆದರೆ ಪೊಲೀಸ್‌ ಅರಣ್ಯ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಯಾವುದೇ ಕಟ್ಟಡವಿಲ್ಲ.

ಗೋವಾ ಮದ್ಯವನ್ನು ಕರ್ನಾಟಕ ರಾಜ್ಯಕ್ಕೆ ಸಾಗಣೆ ಮಾಡುವುದಕ್ಕೆ ನಿಷೇಧವಿದೆ. ಅದರೂ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಆಗಾಗ ಗೋವಾ ಮದ್ಯವನ್ನು ಅಕ್ರಮವಾಗಿ ಕಾರವಾರಕ್ಕೆ ಸಾಗಾಟ ಮಾಡಲಾಗುತ್ತದೆ. ಹೀಗಾಗಿ ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಾಗಿ ವಾಹನಗಳನ್ನು ತಪಾಸಣೆ ನಡೆಸಲಾಗುತ್ತದೆ. ಇಲ್ಲಿನ ಸಿ.ಸಿ. ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೊ ತುಣುಕುಗಳ ನೆರವಿನಿಂದ ಹಲವು ಅಪರಾಧ ಕೃತ್ಯಗಳಲ್ಲಿನ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.

ಹೊಸ ಕಟ್ಟಡಕ್ಕೆ ₹ 60 ಲಕ್ಷ ಮಂಜೂರು:  ಗಡಿಯಲ್ಲಿ ತನಿಖಾ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅಬಕಾರಿ ಇಲಾಖೆಯಿಂದ ₹ 60 ಲಕ್ಷ ಮಂಜೂರಾಗಿದ್ದು, ನಿರ್ಮಾಣ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಶೀಘ್ರದಲ್ಲಿಯೇ ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ.

‘ಸಂಯುಕ್ತ ತನಿಖಾ ಠಾಣೆಯ ನೂತನ ಕಟ್ಟಡ ನಿರ್ಮಾಣವಾದ ಬಳಿಕ ಗಡಿಯಲ್ಲಿ ಅತ್ಯಾಧುನಿಕ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು. ಅಲ್ಲಿವರೆಗೆ ಈಗಿರುವ ಕ್ಯಾಮೆರಾ ದುರಸ್ತಿಗೆ ಸೂಚಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ ತಿಳಿಸಿದರು.

* * 

ಕಾರವಾರ ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಹಾಳಾಗಿರುವ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಶೀಘ್ರದಲ್ಲೇ ದುರಸ್ತಿ ಮಾಡಿಸಲಾಗುವುದು
ಗೋಪಾಲ ಬ್ಯಾಕೋಡ
ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.