ADVERTISEMENT

ದ್ವೀಪದ ಕಾಳಿಮಾತಾ ಜಾತ್ರೆ ಸಂಪನ್ನ

ದೇಗುಲದ ಮೇಲೆ ಪ್ರತಿಷ್ಠಾಪಿಲಾಗಿರುವ 10 ಅಡಿ ಗೋಪುರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 8:50 IST
Last Updated 11 ಜನವರಿ 2017, 8:50 IST

ಕಾರವಾರ:  ಇಲ್ಲಿನ ಕಾಳಿನ ನದಿಯಲ್ಲಿನ ಪುಟ್ಟ ದ್ವೀಪದಲ್ಲಿರುವ ಕಾಳಿಮಾತಾ ದೇವರ ಮೂರು ದಿನಗಳ ಜಾತ್ರೆಯು ಮಂಗಳವಾರ ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತು. ಭಕ್ತರು ದೋಣಿಯ ಮೂಲಕ ತೆರಳಿ ದೇವರ ದರ್ಶನ ಪಡೆದರು. 

ಕಾಳಿ ನದಿಯಿಂದ ಸುತ್ತುವರಿದಿರುವ ಈ ದ್ವೀಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಕಾಳಿ ಮಾತೆಯನ್ನು ಅನಾದಿ ಕಾಲದಿಂದಲೂ ಪೂಜಿಸಲಾಗುತ್ತಿದೆ. ಪ್ರತಿವರ್ಷ ನಡೆಯುವ ಜಾತ್ರೆ ಸಂದರ್ಭದಲ್ಲಿ ಸಾವಿರಾರು ಭಕ್ತರು ಕುಟುಂಬ ಸಮೇತ ಇಲ್ಲಿಗೆ ಬಂದು ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ದೋಣಿಯಲ್ಲಿ ಪಯಣ: ಕಾಳಿಮಾತೆಯ ದೇಗುಲಕ್ಕೆ ತೆರಳಲು ನಂದನಗದ್ದಾದ ಸಂತೋಷಿ ಮಾತಾ ದೇವಸ್ಥಾನ ಬಳಿಯ ಕಾಳಿನದಿಯ ದಡದಿಂದ ದೋಣಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 2 ಕಿ.ಮೀ. ದೂರವಿದ್ದ ದ್ವೀಪವನ್ನು ದೋಣಿಯಲ್ಲಿ ತಲುಪಿದರು. ‘ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ಸ್ಥಳೀಯರಲ್ಲದೇ ಗೋವಾ ರಾಜ್ಯದಿಂದ ಕೂಡ ಸಾವಿರಾರು ಭಕ್ತರು ಬರುತ್ತಾರೆ. ಪ್ರತಿನಿತ್ಯ ಬೆಳಿಗ್ಗೆ ಇಲ್ಲಿ ಪೂಜೆ ಜರುಗುತ್ತದೆ. ಭಾನುವಾರ ವಿಶೇಷ ಪೂಜೆ ಇರುತ್ತದೆ.

ಎಲ್ಲ ದಿನವೂ ದೋಣಿ ವ್ಯವಸ್ಥೆಯಿದೆ. ಹಿಂದೆ ವಿದ್ಯುದ್ದೀಪ, ಜನರೇಟರ್ ವ್ಯವಸ್ಥೆ ಹಾಗೂ ಹೆಚ್ಚಿನ ಪ್ರಚಾರ ಇಲ್ಲದ ಕಾರಣ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಇತ್ತೀಚೆನ ವರ್ಷದಲ್ಲಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲಾಗಿದೆ’ ಎಂದು ದೇವಸ್ಥಾನದ ಟ್ರಸ್ಟಿ ಶ್ರೀಧರ ಅಳಗೇಕರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.