ADVERTISEMENT

‘ನುಡಿ ಹಬ್ಬ’ ನೆಪದಲ್ಲಿ ಕನ್ನಡದ ಹಣ ಪೋಲು:ಆರೋಪ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:47 IST
Last Updated 24 ಮಾರ್ಚ್ 2017, 6:47 IST

ಕುಮಟಾ: ‘ಜಿಲ್ಲೆಯ ಗಡಿ ಪ್ರದೇಶವಾದ ಜೊಯಿಡಾದಲ್ಲಿ  ಕನ್ನಡ ಅಭಿವೃದ್ಧಿ  ಪ್ರಾಧಿಕಾರ ವತಿಯಿಂದ ಕಾಟಾಚಾರಕ್ಕೆ ‘ನುಡಿ ಹಬ್ಬ’ ಆಚರಿಸುವ ಮೂಲಕ ಕನ್ನಡ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ವ್ಯರ್ಥಗೊಳಿಸಲಾಗುತ್ತಿದೆ’ ಎಂದು ಜಿಲ್ಲಾ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಆರೋಪಿಸಿದರು.

ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅಧ್ಯಕ್ಷತೆಯ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಜಿಲ್ಲೆಯ ಕನ್ನಡ ಪರ ಸಂಘಟನೆಗಳನ್ನು ಕಡೆಗಣಿಸಿ ಜಿಲ್ಲಾಡಳಿತದ ಸಹಯೋಗದೊಂದಿಗೆ  ‘ನುಡಿ ಹಬ್ಬ’ ಆಚರಿಸುತ್ತಿದೆ.

ಆದರೆ ಇಂಥ ಕಾರ್ಯಕ್ರಮಗಳನ್ನು ಆಯೋಜಿ ಸುವವರಿಗೆ ಜೊಯಿಡಾ ತಾಲ್ಲೂಕಿನಲ್ಲಿ ದುಸ್ಥಿತಿಯಲ್ಲಿರುವ ಕನ್ನಡ ಶಾಲೆಗಳ ಬಗ್ಗೆ ಪ್ರಜ್ಞೆಯೇ ಇಲ್ಲವಾಗಿದೆ ಎಂದು ದೂರಿದರು.

ಕೆಲ ದಿವಸಗಳ ಹಿಂದೆ ‘ ನುಡಿ ಹಬ್ಬ’ದಲ್ಲಿ ಅತಿಥಿಯಾಗಿ ಪಾಲ್ಗೊಳ್ಳು ವಂತೆ ವಿನಂತಿಸಿ ಕಸಾಪ ಜೊಯಿಡಾ ಘಟಕ ಅಧ್ಯಕ್ಷರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪತ್ರವೊಂದು ಬಂದಿತ್ತು. ನಂತರ ಈ ಕ್ಷಣದವರೆಗೆ ಆವರಿಗಾಗಲಿ, ನನಗಾಲಿ ಸೌಜನ್ಯಕ್ಕೂ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಂದಿಲ್ಲ.

ಜಿಲ್ಲೆಯ ಹಿರಿಯ ಕವಿ ವಿಷ್ಣು ನಾಯ್ಕ ಅವರನ್ನು ಮಾತ್ರ ಆಮಂತ್ರಿಸ ಲಾಗಿದೆ. ಕಾರ್ಯಕ್ರಮದ ತಯಾರಿಯ ಬಗ್ಗೆ ಯಾವ ಕನ್ನಡ ಪರ  ಸಂಘಟನೆಯ ಜೊತೆಗೂ ಸಂಘಟಕರು ಚರ್ಚಿಸದೇ ಏಕಾ ಏಕಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಜೊಯಿಡಾದಲ್ಲಿ ಕನ್ನಡ ಪರ ಕಾರ್ಯಕ್ರಮ ಬೇಕಾಬಿಟ್ಟಿ ನಡೆಸುವ ಮೂಲಕ ಜೊಯಿಡಾವನ್ನು ಕಸದ ಬುಟ್ಟಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಭಾವಿಸಿದಂತಿದೆ’ ಎಂದು ಕಿಡಿಕಾರಿದರು.

‘ನೆಲ ಮೂಲಕ ಸಂಸ್ಕೃತಿಯ ಬಗ್ಗೆ ಹಿರಿಯ ಕವಿ ಪ್ರೊ. ಎಸ್.ಜಿ. ಸಿದ್ದರಾ ಮಯ್ಯ ಮಾತನಾಡುತ್ತಾರೆ. ಆದರೆ  ಜೊಯಿಡಾ ಕೂಡ ಒಂದು ಮೂಲ ಸಂಸ್ಕೃತಿಯ ನೆಲವಾಗಿದೆ. ಇಲ್ಲಿಯ ಕನ್ನಡಿಗರ ಮೇಲೆ ಒಂದು ಕಡೆಯಿಂದ ಮರಾಠಿ, ಇನ್ನೊಂದೆಡೆಯಿಂದ ಕೊಂಕ ಣಿ ಭಾಷೆಯ ಒತ್ತಡ  ಸದಾ ಇರುವಾಗ ನಮ್ಮತನ ಉಳಿಸಿಕೊಳ್ಳಲು ಕನ್ನಡ ಪರ  ಎಲ್ಲ ಸಂಘಟನೆಗಳು ಸೇರಿ ಹೋರಾಟ ನಡೆಸಬೇಕಿದೆ ಎಂದು  ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಶ್ರೀಧರ ಉಪ್ಪಿನಗಣಪತಿ, ಪದಾಧಿಕಾರಿಗಳಾದ ಎಂ.ಎಂ. ನಾಯ್ಕ, ಉಮೇಶ ಮುಂಡಳ್ಳಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.