ADVERTISEMENT

ಪಟ್ಟಣಕ್ಕೆ ನಿತ್ಯ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:43 IST
Last Updated 20 ಮೇ 2017, 5:43 IST

ಕುಮಟಾ: ಕಡಿಮೆಯಾಗಿದ್ದ ಅಘನಾಶಿನಿ ನದಿಯ ಮರಾಕಲ್ ಕುಡಿಯುವ ನೀರು ಯೋಜನೆಯ ದೀವಳ್ಳಿ ಗ್ರಾಮದ ಜಾಕ್ ವೆಲ್‌ ಪ್ರದೇಶದಲ್ಲಿ ಮತ್ತೆ ನೀರು ಸಂಗ್ರಹವಾಗಿರುವುದರಿಂದ ಅವಳಿ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಂತಾಗಿದೆ.

ಕಳೆದ ವರ್ಷ ಕುಡಿಯುವ ನೀರಿನ  ತೀವ್ರ ಸಮಸ್ಯೆ ಎದುರಿಸಿದ ನಂತರ ಸ್ಥಳೀಯ ಪುರಸಭೆ ದೀವಳ್ಳಿ ಬಳಿ ಅಘನಾಶಿನಿ ನದಿಗೆ ಒಂದು ಮೀಟರ್ ಎತ್ತರದ ಒಡ್ಡು ನಿರ್ಮಿಸಿ ನೀರು ಸಂಗ್ರಹವಾಗುವಂತೆ ಮಾಡಿತ್ತು.

ಆದರೆ ಸಂಗ್ರಹವಾಗಿದ್ದ ನೀರು ಏಪ್ರಿಲ್ ಕೊನೆಯ ವಾರದಲ್ಲಿ ಖಾಲಿಯಾಗಿ ಪಟ್ಟಣದ ಜನರಿಗೆ ಎರಡು ದಿವಸಗಳಿಗೊಮ್ಮೆ ಕುಡಿಯುವ ನೀರು ಬಿಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮೊನ್ನೆ  ಮಳೆ ಬಿದ್ದ ನಂತರ ನದಿಯಲ್ಲಿ ಮತ್ತೆ ನೀರು ಸಂಗ್ರಹಗೊಂಡಿದ್ದು, ಪಟ್ಟಣದ ಜನತೆಗೆ ಈಗ ನಿತ್ಯ ನೀರು ಬಿಡಲಾಗುತ್ತಿದೆ.

ADVERTISEMENT

‘ದೀವಳ್ಳಿ ಬಳಿ ಅಘನಾಶಿನಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸುವ ಉದ್ದೇಶದಿಂದ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಒಡ್ಡನ್ನು ಇನ್ನೂ ಒಂದು ಮೀಟರ್ ಎತ್ತರಿಸಲು ₹ 15 ಲಕ್ಷ ಮಂಜೂರಾಗಿತ್ತು. ಆದರೆ, ಮಳೆ ಬಿದ್ದ ನಂತರ ನದಿಯಲ್ಲಿ ಈಗ ನೀರಿನ ಹರಿವು ಹೆಚ್ಚಾಗಿ ಒಡ್ಡಿನ ಮಟ್ಟಕ್ಕೆ ಬಂದು ನಿಂತಿದೆ.

ನೀರು ತುಂಬಿದ್ದರಿಂದ ಒಡ್ಡು ಎತ್ತರಿಸುವ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ.  ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಕಾಮಗಾರಿ ಆರಂಭಿಸಬಹುದಾಗಿದೆ. ಸದ್ಯದ ಸ್ಥಿತಿಯಲ್ಲಿ ಜೂನ್ ವರೆಗೆ ಪಟ್ಟಣದ ಜನರಿಗೆ  ಪೂರೈಕೆ ಮಾಡುವಷ್ಟು  ನದಿಯಲ್ಲಿ  ನೀರಿನ ಸಂಗ್ರಹ ಇದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಸುರೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.