ADVERTISEMENT

ಪಿಡಿಓಯಿಂದ ಸುಳ್ಳು ಮಾಹಿತಿ: ಕ್ರಮಕ್ಕೆ ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 7:08 IST
Last Updated 20 ಮಾರ್ಚ್ 2017, 7:08 IST

ಹಳಿಯಾಳ: ಬಸವ ವಸತಿ ಯೋಜನೆ ಯಡಿ ಗ್ರಾಮ ಪಂಚಾಯ್ತಿಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಿಯಮಾನುಸಾರವಾಗಿ ನಡೆಯದೇ ಇದ್ದರೂ ಕೂಡ ವಸತಿ ಯೋಜನೆಯ ಜಾಗೃತಿ ಸಮಿತಿ ಸಭೆಯಲ್ಲಿ ಸುಳ್ಳು ಮಾಹಿತಿ ನೀಡಿದ್ದ ಕೇಸರೊಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ  ಅಧಿಕಾರಿಯ ವಿರುದ್ಧ  ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಭಾನುವಾರ ಸ್ಥಳಿಯ ತಾಲ್ಲೂಕು ಪಂಚಾಯ್ತಿ  ಸಭಾ ಭವನದಲ್ಲಿ ಸಚಿವರ  ಅಧ್ಯಕ್ಷತೆಯಲ್ಲಿ ನಡೆದ ವಸತಿ ಯೋಜನೆಯ ಜಾಗೃತ ಸಮಿತಿ ಸಭೆಯಲ್ಲಿ ಕೇಸರೊಳ್ಳಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಂಜೂರಾತಿಯ ಅನುಮೋದನೆಯ ಕುರಿತು ಪರಿಶೀಲನೆ ನಡೆಸಿದಾಗ ಪಿಡಿಓ ಹಾಗೂ ವಸತಿ ಯೊಜನೆಯ ನೋಡಲ್ ಅಧಿಕಾರಿ ಉತ್ತರ ಒಂದಕ್ಕೊಂದು ತಾಳೆ ಇಲ್ಲದೇ ಇರುವುದು ಹಾಗೂ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಸಂಪೂರ್ಣ ಸರ್ಕಾರದ ನಿಯಮಾನು ಸಾರವಾಗಿ ನಡೆಯದೇ ಇರುವುದನ್ನು ಕಂಡು ಸಚಿವರು ಆಕ್ರೋಶಗೊಂಡರು.

ಕೂಡಲೇ ಕೇಸರೊಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ರದ್ದು ಗೊಳಿಸಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಿದರು.

ಕೆಲ ನಿಮಿಷದ ನಂತರ, ಸಭೆಯಲ್ಲಿ ಹಾಜರಿದ್ದ ತಾಲ್ಲೂಕಿನ ಎಲ್ಲ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸೇರಿ ಸಭೆಯಲ್ಲಿಯೇ ಸಚಿವರ ಬಳಿ ತೆರಳಿ ಕೆಸರೋಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ಪರ ಸಮಜಾಯಿಷಿ ನೀಡಲು ಪ್ರಯತ್ನಿಸಿದಾಗ ಇನ್ನಷ್ಟು ಕೋಪಗೊಂಡ ಸಚಿವರು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಬರಗಾಲ ತಡೆಗಟ್ಟುವ ಕಾಮಗಾರಿಕೆಯಡಿಯಲ್ಲಿ ಚೆಕ್ ಡ್ಯಾಮ ನಿರ್ಮಿಸಲು ₹ 2.25 ಕೋಟಿಯ   45 ಕಾಮಗಾರಿ ಆದೇಶ ಪತ್ರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿದರು.

ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಸುಭಾಷ ಕೋರ್ವೇಕರ, ತಾಲ್ಲೂಕ ಪಂಚಾಯ್ತಿ  ಅಧ್ಯಕ್ಷೆ ರೀಟಾ ಸಿದ್ದಿ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ವಿವಿಧ ಇಲಾಖೆಯ ನೋಡಲ್ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT