ADVERTISEMENT

ಪ್ರತಿ ಬೂತ್‌ನಲ್ಲಿ ನೂರು ಮನೆಗೆ ಭೇಟಿ ನೀಡಿ

ಪದಾಧಿಕಾ­ರಿಗಳ ಸಮಾವೇಶ: ಕಾಂಗ್ರೆಸ್‌ ಪಕ್ಷದ ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕ್ಯಂ ಟ್ಯಾಗೋರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 11:21 IST
Last Updated 10 ಜುಲೈ 2017, 11:21 IST

ಶಿರಸಿ: ಸ್ಥಾನಿಕವಾಗಿ ಬೂತ್‌ ಸಮಿತಿಗಳು ಸದೃಢವಾಗಿದ್ದರೆ ಪಕ್ಷಕ್ಕೆ ಖಂಡಿತ ಗೆಲುವು ಸಿಗುತ್ತದೆ. ಪ್ರತಿ ಬೂತ್‌ ವ್ಯಾಪ್ತಿಯಲ್ಲಿ ನೂರು ಮನೆಗಳನ್ನು ತಲುಪಿ ಕಾಂಗ್ರೆಸ್‌ ಪಕ್ಷದ ಸಾಧನೆಯನ್ನು ಮತದಾರರಿಗೆ ತಿಳಿಸಬೇಕು ಎಂದು ಎಐಸಿಸಿ ಕಾರ್ಯ­ದರ್ಶಿ ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕ್ಯಂ ಟ್ಯಾಗೋರ್ ಸೂಚಿಸಿದರು.

ಭಾನುವಾರ ಇಲ್ಲಿ ಆಯೋಜಿಸಿದ್ದ ಬ್ಲಾಕ್‌ ಕಾಂಗ್ರೆಸ್‌ ವ್ಯಾಪ್ತಿಯ ಬೂತ್ ಮತ್ತು ಘಟಕ ಸಮಿತಿಗಳ ಪದಾಧಿಕಾ­ರಿಗಳ ಸಮಾವೇಶದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಮಾಡಿರುವ ಸಾಧನೆ ಜನರಿಗೆ ತಲುಪಿಸು­ವಲ್ಲಿ ಬೂತ್‌ ಸಮಿತಿಗಳ ಪಾತ್ರ ಮಹತ್ವ­ದ್ದಾಗಿದೆ. ತಳಮಟ್ಟದಲ್ಲಿ ಪಕ್ಷ ಗಟ್ಟಿಯಾ­ದಾಗ ಮಾತ್ರ ಅಭಿವೃದ್ಧಿಯ ಮಾರ್ಗದಲ್ಲಿ ಮುನ್ನಡೆಯಲು ಸಹಕಾರಿಯಾಗುತ್ತದೆ. ಅಲ್ಲದೇ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಹೋರಾಡಲು ಬೂತ್ ಸಮಿತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ADVERTISEMENT

ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಅಷ್ಟರೊಳಗೆ ಬೂತ್ ಮಟ್ಟದ ಕಾರ್ಯ­ಕರ್ತರು ಮನೆ ಮನೆ ಸಂಪರ್ಕ ಮಾಡ­ಬೇಕು. ಪ್ರತಿ 15 ದಿನಗಳಿಗೊಮ್ಮೆ ಬೂತ್ ಅಧ್ಯಕ್ಷರ ಸಭೆ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ನಡೆಯಬೇಕು. ಕಾರ್ಯ­ಕರ್ತರು ಸಕ್ರಿಯರಾದರೆ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವು ಕಷ್ಟವಲ್ಲ ಎಂದು ಹೇಳಿದರು. 

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ‘ಬ್ಲಾಕ್ ಅಧ್ಯಕ್ಷರು ಮನೆಯಲ್ಲಿ ಕುಳಿತು ಪದಾಧಿಕಾರಿಗಳ ಪಟ್ಟಿಯನ್ನು ಸಿದ್ಧ­ಪಡಿಸ­ಬಾರದು. ಆಯಾ ಭಾಗದ ಜನಪ್ರತಿನಿಧಿಗಳು, ಘಟಕದ ಪದಾಧಿ­ಕಾರಿ­ಗಳು, ಕಾರ್ಯಕರ್ತರ ಅಭಿಪ್ರಾಯ ಪಡೆದು ನಿಷ್ಠಾವಂತರಿಗೆ ಸ್ಥಾನಮಾನ ನೀಡಬೇಕು.

ಚುನಾವಣೆಗೆ ಸೀಮಿತವಾಗಿ ಪಕ್ಷ ಕ್ರಿಯಾಶೀಲವಾಗಿರಬಾರದು. ಸದಾ ಚಟುವಟಿಕೆಯಲ್ಲಿದ್ದಾಗ ಮಾತ್ರ ಜನರು ನಮ್ಮನ್ನು ಸ್ವೀಕರಿಸುತ್ತಾರೆ. ಸಂಘಟನೆ ಕಷ್ಟದ ಕೆಲಸವಾಗಿದೆ. ಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡುವವರೇ ಪಕ್ಷಕ್ಕೆ ಬಲವಾಗಿದ್ದಾರೆ’ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ ಕುನ್ನೂರ್ ಮಾತನಾಡಿ, ‘ರಾಜ್ಯದ ಎಲ್ಲ ಬ್ಲಾಕ್‌ಗಳಲ್ಲಿ ಇಂತಹ ಸಮಾವೇಶ ನಡೆ­ಯಲಿದ್ದು, ಶಿರಸಿಯಲ್ಲಿ ಇದಕ್ಕೆ ಚಾಲನೆ ದೊರೆತಿದೆ’ ಎಂದರು.

ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ನಗರಸಭೆ ಅಧ್ಯಕ್ಷೆ ಅರುಣಾ ವೆರ್ಣೇಕರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ರಾಜೇಂದ್ರ ನಾಯ್ಕ ಇದ್ದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ದುಬಾಶಿ ಸ್ವಾಗತಿಸಿದರು. ಕಾರ್ಯಾಲಯ ಕಾರ್ಯದರ್ಶಿ ಸತೀಶ ನಾಯ್ಕ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.