ADVERTISEMENT

ಬಂದರಲ್ಲಿ ಹೊರ ರಾಜ್ಯದ ದೋಣಿಗಳು ಠಿಕಾಣಿ

ಪಿ.ಕೆ.ರವಿಕುಮಾರ
Published 21 ಸೆಪ್ಟೆಂಬರ್ 2017, 5:14 IST
Last Updated 21 ಸೆಪ್ಟೆಂಬರ್ 2017, 5:14 IST
ಕಾರವಾರದ ಬೈತಖೋಲ್‌ ಬಂದರು ಬಳಿ ಲಂಗರು ಹಾಕಿರುವ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ದೋಣಿಗಳು
ಕಾರವಾರದ ಬೈತಖೋಲ್‌ ಬಂದರು ಬಳಿ ಲಂಗರು ಹಾಕಿರುವ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ದೋಣಿಗಳು   

ಕಾರವಾರ: ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ಕರಾವಳಿ ಜಿಲ್ಲೆಗಳ ದೋಣಿಗಳು ಸೇರಿದಂತೆ ಕೇರಳ ಹಾಗೂ ಗೋವಾ ರಾಜ್ಯಗಳ 60ಕ್ಕೂ ಅಧಿಕ ದೋಣಿಗಳು ಇಲ್ಲಿನ ಬೈತಖೋಲ್‌ ಬಂದರು ಬಳಿ ಲಂಗರು ಹಾಕಿವೆ.

ಆಳಸಮುದ್ರದಲ್ಲಿ ಗಾಳಿ ಹಾಗೂ ತೆರೆಗಳ ಆರ್ಭಟ ಜೋರಾಗಿದೆ. ಕಡಲತೀರದಿಂದ ಸುಮಾರು 50 ಕಿ.ಮೀ ವ್ಯಾಪ್ತಿಯಲ್ಲಿ ದೈತ್ಯ ಅಲೆಗಳು ಮೇಲೇಳುತ್ತಿವೆ. ಇವುಗಳು ಸುಮಾರು 7ರಿಂದ 9 ಅಡಿ ಎತ್ತರವಿದೆ. ಇನ್ನು ಗಾಳಿಯು ಗಂಟೆಗೆ 29 ಕಿ.ಮೀ ವೇಗದಲ್ಲಿ ಬೀಸುತ್ತಿವೆ. ಇದರಿಂದ ಸ್ಥಳೀಯ ಪರ್ಸಿನ್‌ ಹಾಗೂ ಟ್ರಾಲರ್‌ ದೋಣಿಗಳು ಬಂದರು ಬಿಟ್ಟು ಕದಲಿಲ್ಲ.

ಮೀನುಗಾರಿಕೆ ಅಸಾಧ್ಯ: ‘ತೂಫಾನ್‌ ಇದ್ದಾಗ ಮೀನುಗಾರಿಕೆಗೆ ತೆರಳುವುದು ಅಪಾಯಕಾರಿ. ಗಾಳಿಯು ಜೋರಾಗಿ ಬೀಸುವುದರಿಂದ ಬಲೆಗಳನ್ನು ಬಿಡಲು ಆಗುವುದಿಲ್ಲ. ಹೈದರಾಬಾದ್‌ನ ಸಾಗರ ಮಾಹಿತಿ ಸೇವೆಗಳ ಭಾರತೀಯ ರಾಷ್ಟ್ರೀಯ ಕೇಂದ್ರವು (incois) ಆಳಸಮುದ್ರದ ಹವಾಮಾನ ಕುರಿತು ಪ್ರತಿನಿತ್ಯ ಮೀನುಗಾರರ ಮೊಬೈಲ್‌ಗೆ ಸಂದೇಶ ಕಳುಹಿಸುತ್ತಾರೆ’ ಎಂದು ಪರ್ಸಿನ್‌ ದೋಣಿ ಮಾಲೀಕ ಏಕನಾಥ ತಿಳಿಸಿದರು.

ADVERTISEMENT

‘ಸಂದೇಶ ಆಧರಿಸಿ ಮೀನುಗಾರಿಕೆ ತೆರಳ ಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತೇವೆ. ಆಳಸಮುದ್ರದಲ್ಲಿ ತೂಫಾನ್‌ ಇರುವುದಾಗಿ ಕೇಂದ್ರವು ಮಾಹಿತಿ ನೀಡಿದೆ. ನಾಲ್ಕೈದು ದಿನಗಳಿಂದ ಇದೇ ರೀತಿಯ ವಾತಾವರಣ ಇರುವುದರಿಂದ ಸ್ಥಳೀಯ ದೋಣಿಗಳು ಬೈತಖೋಲ್‌ ಬಂದರಿನಲ್ಲೇ ಲಂಗರು ಹಾಕಿವೆ. ಮಲ್ಪೆ, ಮಂಗಳೂರು ಬಂದರಿನ ಹಾಗೂ ಹೊರ ರಾಜ್ಯಗಳ ದೋಣಿಗಳು ಸುರಕ್ಷತೆ ದೃಷ್ಟಿಯಿಂದ ಇಲ್ಲಿಯೇ ಠಿಕಾಣಿ ಹೂಡಿವೆ’ ಎಂದು ಅವರು ಹೇಳಿದರು.

ತೊಂದರೆ ನೀಡದಂತೆ ಸೂಚನೆ: ‘ಆಳಸಮುದ್ರದಲ್ಲಿ ಪ್ರತಿಕೂಲ ವಾತಾವರಣವಿದ್ದಾಗ ಹೊರ ಜಿಲ್ಲೆ ಹಾಗೂ ರಾಜ್ಯಗಳ ದೋಣಿಗಳು ಸಮೀಪದ ಕಡಲತೀರದಲ್ಲಿ ಆಶ್ರಯ ಪಡೆಯುವುದು ಸಾಮಾನ್ಯ. ಇದರಿಂದ ಯಾವುದೇ ನಿಯಮ ಉಲ್ಲಂಘನೆ ಆಗುವುದಿಲ್ಲ.

ಆದರೆ ಅವರು ದೋಣಿಯಲ್ಲಿನ ಮೀನುಗಳನ್ನು ಸ್ಥಳೀಯ ಮಾರುಕಟ್ಟೆಗೆ ತಂದು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮೀನು ಹಾಳಾಗುವ ಹಂತಕ್ಕೆ ಬಂದಿದ್ದರೆ ಸ್ಥಳೀಯ ಮೀನುಗಾರರ ಒಕ್ಕೂಟದ ಅನುಮತಿ ಪಡೆದು ಮಾರಾಟ ಮಾಡಬಹುದು. ಬಂದರು ಬಳಿ ಆಶ್ರಯ ಪಡೆದಿರುವ ದೋಣಿಗಳಲ್ಲಿನ ಮೀನುಗಾರರಿಗೆ ಯಾವುದೇ ತೊಂದರೆ ನೀಡದಂತೆ ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಸೂಚಿಸಿದ್ದೇನೆ’ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಲ್‌.ದೊಡ್ಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೀನುಗಳು ತುಟ್ಟಿ
ಆಳಸಮುದ್ರ ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ಮಾರುಕಟ್ಟೆಗೆ ಮೀನುಗಳು ಅಧಿಕವಾಗಿ ಬರುತ್ತಿಲ್ಲ. ಹೀಗಾಗಿ ಮೀನುಗಳು ತುಟ್ಟಿಯಾಗಿದ್ದು, ಕೊಳ್ಳುವವರು ಹಿಂದೇಟು ಹಾಕುತ್ತಿದ್ದಾರೆ. ಬಂಗುಡೆ ಮೀನು ಕೆಲ ದಿನಗಳ ಹಿಂದೆ ₹ 100ಕ್ಕೆ 7–8 ಸಿಗುತ್ತಿತ್ತು. ಆದರೆ ಮೀನಿನ ಅಭಾವದಿಂದಾಗಿ ಇದೀಗ ₹ 100ಕ್ಕೆ 3–4 ಸಿಗುತ್ತಿವೆ. ಬೇರೆ ಮೀನುಗಳ ದರದಲ್ಲಿಯೂ ಕೊಂಚ ಏರಿಕೆಯಾಗಿದೆ.

* * 

ಅರಬ್ಬಿ ಸಮುದ್ರದಲ್ಲಿ ಇನ್ನೂ ಎರಡು ದಿನಗಳು ಪ್ರತಿಕೂಲ ವಾತಾವರಣವಿದ್ದು, ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದೇವೆ
ಎಂ.ಎಲ್.ದೊಡ್ಮನಿ
ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.