ADVERTISEMENT

ಬಜೆಟ್‌ನಲ್ಲಿ ಅನುದಾನ ಕಡಿತ: ವಿರೋಧ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 11:56 IST
Last Updated 11 ಜುಲೈ 2017, 11:56 IST

ಯಲ್ಲಾಪುರ:  ‘ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನನ್ನು ತಿದ್ದುಪಡಿ ಮಾಡಿ, ದುಡಿಯುವ ಕೈಗಳಿಂದ ಕೆಲಸ ಹಾಗೂ ಕನಿಷ್ಠ ಕೂಲಿಯನ್ನು ಕಿತ್ತುಕೊಳ್ಳುವ ಹುನ್ನಾರ ಮಾಡಿದೆ’ ಎಂದು ಸಿ.ಐ.ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಆರೋಪಿಸಿದರು.

ಪಟ್ಟಣದ ಎ.ಪಿ.ಎಂ.ಸಿ ಅಡಿಕೆ ಭವನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಉತ್ತರ ಕನ್ನಡ ಜಿಲ್ಲಾ ಸಮಿತಿ ಸೋಮವಾರ ಹಮ್ಮಿಕೊಂಡ ಮಕ್ಕಳ ಹಾಗೂ ತಾಯಂದಿರ, ಕಿಶೋರಿಯರ ಆಹಾರ-ಆರೋಗ್ಯ, ಶಿಕ್ಷಣದ ಹಕ್ಕು ಉಳಿಸಿ, ಕೇಂದ್ರ ಸರ್ಕಾರ ಬಜೆಟ್ಟಿನಲ್ಲಿ ಅನುದಾನ ಕಡಿತಗೊಳಿಸಿದ್ದನ್ನು ವಿರೋಧಿಸಿ ನಡೆದ ಸಮಾವೇಶದಲ್ಲಿ  ಮಾತನಾಡಿದರು.

‘ಕೇಂದ್ರದ ಈ ತೀರ್ಮಾನವನ್ನು ಅಸಂಘಟಿತ ವಲಯದ ಕಾರ್ಮಿಕರು ಹೋರಾಟ ಮಾಡಿ ಕಾನೂನನ್ನು ತಿದ್ದುಪಡಿ ಮಾಡಲು ಅವಕಾಶ ನೀಡಬಾರದು’ ಎಂದು ಅವರು ಕರೆ ನೀಡಿದರು.

ADVERTISEMENT

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷೆ ಯಮುನಾ ಗಾಂವಕರ್ ಮಾತನಾಡಿ, ‘ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಶಿಫಾರಸುಗಳನ್ನು ಜಾರಿಗೊಳಿಸಬೇಕು, ಅವೈಜ್ಞಾನಿಕ ಜಿ.ಎಸ್.ಟಿ ಪದ್ಧತಿಯನ್ನು ಕೈಬಿಡಬೇಕು.

ಮಿಶನ್ ಮೋಡ್ ಮಾದರಿಯ ಖಾಸಗೀಕರಣ ನಿಲ್ಲಿಸಿ ಕೆಲಸವನ್ನು ಕಾಯಂಗೊಳಿಸಬೇಕು ಹಾಗೂ ಬೆಲೆ ಏರಿಕೆಗೆ ತಕ್ಕಂತೆ ಕನಿಷ್ಠ ಕೂಲಿ ನೀಡುವುದರ ಮೂಲಕ ಮಿನಿ ಅಂಗನ ವಾಡಿಗಳನ್ನು ಪೂರ್ಣಕೇಂದ್ರಗಳಾಗಿ ಪರಿವರ್ತಿಸಬೇಕು’ ಎಂದು ಆಗ್ರಹಿಸಿದರು.

ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್.ಶಾನಭಾಗ, ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ನಾಗಪ್ಪ ನಾಯ್ಕ, ಯಲ್ಲಾಪುರ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಭಾವತಿ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾ ಭಟ್ಟ, ಸಿ.ಐ.ಟಿ.ಯು ಮುಖಂಡ ಎಚ್.ಬಿ.ನಾಯ್ಕ ಇದ್ದರು.

ಇದಕ್ಕೂ ಮುನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು ದೇವಿ ದೇವಸ್ಥಾನದಿಂದ ಎಪಿಎಂಸಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.