ADVERTISEMENT

ಬರಗಾಲ: ಅನುದಾನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 7:25 IST
Last Updated 15 ಏಪ್ರಿಲ್ 2017, 7:25 IST

ಸಿದ್ದಾಪುರ : ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ಸಿದ್ದಾಪುರ ತಾಲ್ಲೂಕಿಗೆ ಬರಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಕುಡಿಯುವ ನೀರಿನ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರಗಾಲ ಕಾಮಗಾರಿಗಳಿಗಾಗಿ ತಾಲ್ಲೂಕಿಗೆ  ₹ 20 ಲಕ್ಷ ಹಣ ಬಂದಿದ್ದು, ಇದನ್ನು 23 ಗ್ರಾಮ ಪಂಚಾಯ್ತಿಗಳಿಗೆ ಹಂಚಿಕೆ ಮಾಡಬೇಕು. ಬರಗಾಲ ಎಂದು ಘೋಷಣೆ ಮಾಡಿದ ಮೇಲೆ ಹೆಚ್ಚಿನ ಅನುದಾನ ನೀಡಬೇಕು ಎಂದರು.ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಉದ್ಯೋಗ ಖಾತರಿಯಲ್ಲಿ ಹೆಚ್ಚಳ ಮತ್ತು ದನ–ಕರುಗಳಿಗೆ ಮೇವು ಹಾಗೂ ನೀರು ಪೂರೈಕೆ ಈ ಮೂರು ಅಂಶಗಳಿಗೆ ಅಧಿಕಾರಿಗಳು ಪ್ರಾಮುಖ್ಯ ನೀಡಬೇಕು ಎಂದರು.

‘ನಮ್ಮ ಸರ್ಕಾರದಲ್ಲಿ ಮಂಜೂರಾಗಿದ್ದ ತಾಲ್ಲೂಕಿನ ಬೇಡ್ಕಣಿ ಕುಡಿಯುವ ನೀರಿನ ಯೋಜನೆ ಇನ್ನೂ ಮುಗಿದಿಲ್ಲ.ಆ ಕಾಮಗಾರಿ  ಮಾಡಲು ಆಗುವುದಿಲ್ಲ ಎಂದು ಗುತ್ತಿಗೆದಾರ ಬರೆದುಕೊಟ್ಟು ಮೂರು ವರ್ಷ ಆಗಿದೆ. ಬೇರೆ ಗುತ್ತಿಗೆದಾರರಿಗೆ ಅದನ್ನು ವಹಿಸಿ  ಕೆಲಸ ಮುಂದುವರಿಸಿಲ್ಲ, ಇದನ್ನು ನೋಡಿದರೆ ಸರ್ಕಾರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ತಿಳಿಯುತ್ತದೆ’ ಎಂದು ಟೀಕಿಸಿದರು.

ADVERTISEMENT

ರೈತರ ಕೃಷಿ ಹೊಂಡ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿ ಮೂಲಕ ಅರ್ಜಿ  ನೀಡಿದ್ದರೂ, ಕೃಷಿ ಇಲಾಖೆ ಅದಕ್ಕೆ ಮಂಜೂರಾತಿ ನೀಡುತ್ತಿಲ್ಲ  ಎಂದು ಮನಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀರಭದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಕೃಷಿ ಹೊಂಡ ನಿರ್ಮಾಣಕ್ಕೆ ಅಗತ್ಯ ದಾಖಲೆ ನೀಡಿದವರ ರೈತರಿಗೆ ತಕ್ಷಣ ಮಂಜೂರಾತಿ ನೀಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರಿಗೆ ತಾಕೀತು ಮಾಡಿದರು.

ಕೆರೆ ಸಂಜೀವಿನಿ ಯೋಜನೆಯ ಬಗ್ಗೆಸಭೆಗೆ ವಿವರ ನೀಡಿದ ಪಂಚಾಯ್ತಿರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿ, ಒಟ್ಟು ₹18 ಲಕ್ಷ  ಮೊತ್ತದಲ್ಲಿ ತಾಲ್ಲೂಕಿನ 5 ಕೆರೆಗಳ (ಮೂಡಳ್ಳಿ ಕೆರೆ,ಹೊನ್ನೇಗುಂಡಿ ಕೆರೆ, ಶಿರಳಗಿ ಕೆರೆ,ಚನಮಾಂವ್ ಕೆರೆ, ಮರಗುಣಿ ಕೆರೆ) ಹೂಳೆತ್ತಲು ಕ್ರಿಯಾ ಯೋಜನೆ ಮಂಜೂರು ಸಿಗುವ ಹಂತದಲ್ಲಿದೆ. ಮಂಜೂರಾದ ಕೂಡಲೇ ಕೆಲಸ ಆರಂಭವಾಗುತ್ತದೆ ಎಂದರು.

ಅರಣ್ಯ ಇಲಾಖೆಯವರು ಕಾಡಿನಲ್ಲಿ ಕಾಲುವೆ(ಟ್ರೆಂಚ್) ಹೊಡೆಯುವಂತಹ ಕೆಲಸಗಳಿಗೆ ಕಾಲಹರಣ ಮಾಡದೇ ನೀರು ಇಂಗಿಸುವಂತಹ ಕೆಲಸಗಳನ್ನು ಜಾಸ್ತಿ ಮಾಡಬೇಕು. ಕೆರೆ ಹೂಳೆತ್ತಲು, ಕೃಷಿ ಹೊಂಡಕ್ಕೆ ಪ್ರಾಮುಖ್ಯ ನೀಡಬೇಕು.  ನೀರು ಕಾಡು ಪ್ರಾಣಿಗಳಿಗೂ ಅಗತ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ  ಶಾಸಕರು ಸೂಚನೆ ನೀಡಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುಧೀರ್ ಗೌಡರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸುಮಂಗಲಾ ನಾಯ್ಕ, ಎಂ.ಜಿ.ಹೆಗಡೆ ಗೆಜ್ಜೆ, ನಾಗರಾಜ ನಾಯ್ಕ ಬೇಡ್ಕಣಿ, ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಹಶೀಲ್ದಾರ್ ಪಟ್ಟರಾಜ ಗೌಡ,ತಾಲ್ಲೂಕು ಪಂಚಾಯ್ತಿ ಇಒ ಎಸ್.ವಿ.ಭಟ್ಟ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.