ADVERTISEMENT

ಬೈಪಾಸ್ ಸರ್ವೆ: ಹೋರಾಟಕ್ಕೆ ಕಾದು ಕುಳಿತಿದ್ದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:42 IST
Last Updated 10 ಜನವರಿ 2017, 5:42 IST
ಕುಮಟಾ: ಬೈಪಾಸ್ ಮೂಲಕ ಚತುಷ್ಪಥ ಹೆದ್ದಾರಿ ನಿರ್ಮಾಣದ ಸರ್ವೆ ಕಾರ್ಯ ನಡೆಸಲು ಬರುವ ಅಧಿಕಾರಿಗಳ  ವಿರುದ್ಧ ಪ್ರತಿಭಟನೆ ನಡೆಸಲು ಬೈಪಾಸ್ ವಿರೋಧಿ ಹೋರಾಟ ಸಮಿತಿ ಸದಸ್ಯರು ತಾಲ್ಲೂಕಿನ ವಿವಿಧೆಡೆ ಕಾದು ಕುಳಿತು ನಂತರ ವಾಪಸ್ ತೆರಳಿದ ಪ್ರಸಂಗ ಸೋಮವಾರ ಜರುಗಿತು.
 
ಬೈಪಾಸ್  ಆರಂಭವಾಗುವ  ಮಣಕಿ, ಚತುಷ್ಪಥ ಹಾದು ಹೋಗುವ ತಾಲ್ಲೂಕಿನ ಬಗ್ಗೋಣ ಹಾಗೂ ಬೈಪಾಸ್ ನಿಂದ ಮತ್ತೆ ಹೆದ್ದಾರಿ ಸಂಪರ್ಕಿಸುವ ಹಂದಿಗೋಣ ಬಳಿ  ಸರ್ವೆ ಕಾರ್ಯಕ್ಕೆ ಬರುವ ಅಧಿಕಾರಿಗಳನ್ನು ತಡೆದಯಲು ಮಹಿಳೆಯರು ಸೇರಿದಂತೆ ನೂರಾರು ಜನರು ಕಾದು ಕುಳಿತಿದ್ದರು. ಆದರೆ ಸೋಮವಾರ ಯಾವುದೇ ಅಧಿ­ಕಾರಿಗಳು ಸರ್ವೆ ಕಾರ್ಯಕ್ಕೆ ಬರಲಿಲ್ಲ.
 
ಈ ಸಂದರ್ಭದಲ್ಲಿ ಮಾತಬಾಡಿದ ಬೈಪಾಸ್ ವಿರೋಧ  ಹೋರಾಟ ಸಮಿತಿ ಅಧ್ಯಕ್ಷ, ವಕೀಲ ಆರ್‌.ಜಿ. ನಾಯ್ಕ, ‘ ಕುಮಟಾದಲ್ಲಿ ಮಾತ್ರ ಚತುಷ್ಪಥ ಹೆದ್ದಾರಿಯನ್ನು ಬೈಪಾಸ್ ಮೂಲಕ ನಿರ್ಮಿಸಲು ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ. ಮಹಾದೇವಪ್ಪ, ರಮಾ­ನಾಥ ರೈ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಒಪ್ಪಿಗೆ ನೀಡಿದ್ದಾರೆ. ಆದರೆ ಬೈಪಾಸ್ ವಿರುದ್ಧದ ಹೋರಾಟ ಮಾತ್ರ ಎಂದಿಗೂ ನಿಲ್ಲದು’ ಎಂದರು.
 
‘ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಜಾಗದಲ್ಲಿಯೇ  ರಸ್ತೆ ವಿಸ್ತಿರ್ಣಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಶೇ.88 ರಷ್ಟು ಜಾಗ ಇದೆ. ಉಳಿದ ಶೇ  12 ರಷ್ಟು ಜಾಗವನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಬೇಕಿದೆ.  ಜೀವನವಿಡೀ ದುಡಿದು ಕಷ್ಟಪಟ್ಟು ಕಟ್ಟಿದ ನಮ್ಮ ಮನೆಗಳು ಹೆದ್ದಾರಿ ಯೋಜನೆಗೆ ಬಲಿಯಾದರೆ ನಾವೆಲ್ಲ ಎಲ್ಲಿ ಹೋಗಬೇಕು’ ಎಂದು ಹೊಸ ಹೆರವ­ಟ್ಟಾದ ಪುಷ್ಪಾ ನಾಯ್ಕ ಪ್ರಶ್ನಿಸಿದರು.
 
‘ಕೇರಳದಿಂದ  ಗೋವಾವರೆಗೆ ಚತುಷ್ಪಥ ಹೆದ್ದಾರಿ ಎಲ್ಲಿಯೂ ಬೈಪಾಸ್ ಮೂಲಕ ಹಾದು ಹೋಗುತ್ತಿಲ್ಲ. ಜನರ ಬದುಕು ಹಾಳು ಮಾಡುವ ಚತುಷ್ಪಥ ಹೆದ್ದಾರಿ ಯಾರಿಗಾಗಿ?’ ಎಂದು ರುಕ್ಮಿಣಿ  ಮೋಹನ ಎನ್ನುವ ಮಹಿಳೆ ಕೇಳಿದರು. ಮೋಹನ ನಂಬಿಯಾರ್ ಎನ್ನುವವರು, ‘ಕೆಲವು ಶ್ರೀಮಂತ ಹಾಗೂ ಪ್ರಭಾವಿ ವ್ಯಕ್ತಿಗಳ ಕಟ್ಟಡ, ಆಸ್ತಿ ಉಳಿಸಲು ಬೈಪಾಸ್  ಗೆ ಒತ್ತಾಯಿಸಲಾಗುತ್ತಿದೆ. ಈಗಿರುವ ರಾಷ್ಟ್ರೀಯ ಹೆದ್ದಾರಿಯನ್ನೇ ವಿಸ್ತರಣೆ ಮಾಡಿದರೆ ಹೆಚ್ಚಿನ ಜನರಿಗೆ ತೊಂದರೆಯಾಗದು’ ಎಂದರು. ಸುರೇಶ ಭಂಡಾರಿ,  ಹರೀಶ ಶೇಟ್,  ಶಿರಾಲಿಕರ್,  ಪುರಸಭೆ ಸದಸ್ಯ ಕಾಂತರಾಜ್ ಹಾಗೂ ಸಂಪತ್ ಕುಮಾರ ಮತ್ತಿತತರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.