ADVERTISEMENT

ಭತ್ತ ಬಿತ್ತನೆ ಕಾರ್ಯ ಚುರುಕು

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:45 IST
Last Updated 25 ಮೇ 2017, 9:45 IST

ಶಿರಸಿ: ಸೆಖೆಯ ಧಗೆ ಮುಂದುವರಿದಿದೆ. ಆದರೆ ಆಗಸದಲ್ಲಿ ತೇಲಿಬರುತ್ತಿರುವ ಮೋಡ ಮುಂಗಾರಿನ ಭರವಸೆ ಮೂಡಿ ಸಿದೆ. ವಾರದ ಹಿಂದೆ ಬಿದ್ದಿರುವ ಮೊದಲ ಮಳೆ ರೈತರಿಗೆ ಗದ್ದೆ ಹದಗೊಳಿಸಲು ಅನುವಾಗಿದೆ. ತಾಲ್ಲೂಕಿನ ಪೂರ್ವಭಾಗದ ರೈತರು ಭತ್ತ ಬಿತ್ತನೆಗೆ ಅಣಿಯಾಗುತ್ತಿದ್ದಾರೆ.

ಪೂರ್ವ ಭಾಗದ ಬನವಾಸಿ, ದಾಸನ ಕೊಪ್ಪ, ಅಂಡಗಿ, ಗುಡ್ನಾಪುರ ಗ್ರಾಮ ಪಂಚಾಯ್ತಿಗಳ ಬಿತ್ತನೆ ಕ್ರಮದಲ್ಲಿ ರೈತರು ಭತ್ತ ಬೆಳೆಯುತ್ತಾರೆ. ಬೇಸಿಗೆಯ ಕೊನೆ ಯಲ್ಲಿ ಮಳೆ ಬರುವುದನ್ನೇ ಕಾಯುವ ರೈತರು ಮಳೆ ಬಿದ್ದಿದ್ದೇ ತಡ ಬಿತ್ತನೆ ಆರಂಭಿಸುತ್ತಾರೆ. ಕಳೆದ ವಾರ ಸುರಿದ ಮಳೆ ರೈತರಲ್ಲಿ ಉತ್ಸಾಹ ಮೂಡಿಸಿದೆ. ದನಗನಹಳ್ಳಿ, ಕುಪ್ಪಳ್ಳಿ, ಬೆಳ್ಳನಕೇರಿ, ದಾಸನಕೊಪ್ಪ, ಅಂಡಗಿ, ರಂಗಾಪುರ ಬಿತ್ತನೆ ಚುರುಕುಗೊಂಡಿದೆ.

ತಾಲ್ಲೂಕಿನಲ್ಲಿ 9250 ಹೆಕ್ಟೇರ್ ಭತ್ತ ಬಿತ್ತನೆ ಪ್ರದೇಶದಲ್ಲಿ ಕೆಲವೆಡೆ ಭೂಮಿ ಹದಗೊಳಿಸುವ ಕಾರ್ಯವಾಗಿದೆ. ಶಿರಸಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಕೇವಲ 25 ಹೆಕ್ಟೇರ್‌ ಕ್ಷೇತ್ರದಲ್ಲಿ ಮಾತ್ರ ಬಿತ್ತನೆಯಾಗುತ್ತದೆ. ಉಳಿದ ಪ್ರದೇಶ ಗಳಲ್ಲಿ ನಾಟಿ ಕಾರ್ಯ ನಡೆಯುತ್ತದೆ. ಇದಕ್ಕೆ ಇನ್ನೂ ಸಮಯವಿದೆ.

ಕೂರಿಗೆ ಬಿತ್ತನೆಯೇ ಪ್ರಮುಖವಾಗಿರುವ ಬನ ವಾಸಿ ಭಾಗದ ರೈತರ ಅನುಕೂಲಕ್ಕಾಗಿ ಬನವಾಸಿ ರೈತ ಸಂಪರ್ಕ ಕೇಂದ್ರಲ್ಲಿ ಭತ್ತದ ಬೀಜಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ವಿ. ಕೂರ್ಸೆ ಹೇಳಿದರು.

ಜಯಾ 100 ಕ್ವಿಂಟಲ್, 1001 ತಳಿ 50 ಕ್ವಿಂಟಲ್, ಜೆಜಿಎಲ್ 30 ಕ್ವಿಂಟಲ್, ಅಭಿಲಾಷಾ 50 ಕ್ವಿಂಟಲ್ ಭತ್ತದ ಬೀಜಗಳನ್ನು ಬನವಾಸಿ ಕೇಂದ್ರದಲ್ಲಿ ಸಂಗ್ರಹಿಸಲಾಗಿದೆ. 1010, ಇಂಟಾನ್ ತಳಿಯ ಭತ್ತದ ಬೀಜ ಸಹ ಲಭ್ಯವಿದೆ. ರಸಗೊಬ್ಬರ ಹಾಗೂ ಕೀಟನಾಶಕಗಳು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹ ಇವೆ ಎಂದು ಹೇಳಿದರು.

ಈಗಾಗಲೇ ಇಲಾಖೆಯಿಂದ ಸಬ್ಸಿಡಿಯಲ್ಲಿ ನೀಡುವ ಭತ್ತದ ಬೀಜಗಳನ್ನು ಖರೀದಿಸಲು ರೈತರು ಮುಂದೆ ಬರುತ್ತಿದ್ದಾರೆ. ಮುಸಕಿನ ಜೋಳದ ಬೀಜಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಹೇಳಿದರು.

ಬರಗಾಲದ ಕರಾಳತೆಗೆ ಕೃಷಿ ಕ್ಷೇತ್ರ ಬಲಿಯಾಗುವುದನ್ನು ತಡೆದು ರೈತರ ಬದುಕು ಹಸನಾಗಿಸಲು ಕೃಷಿಭಾಗ್ಯ ಯೋಜನೆ ಜಾರಿಯಲ್ಲಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯ ರೈತರಿಗೆ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಅವಕಾಶ ದೊರೆತಿದೆ.

ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯಡಿ ತಾಲ್ಲೂಕಿನಲ್ಲಿ 1500 ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು ಅರ್ಜಿ ಭರ್ತಿಗೊಳಿ ಸುವ ಕಾರ್ಯ ಪ್ರಾರಂಭವಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಕೃಷಿ ಹೊಂಡಗಳ ರಚನೆಯ ಗಾತ್ರದಲ್ಲಿ ಸರ್ಕಾರದ ನಿಯಮ ನಿಗದಿಪಡಿಸಿದೆ. ಸಾಮಾನ್ಯ ರೈತರಿಗೆ ಶೇ 80ರಷ್ಟು ಹಾಗೂ  ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ 90ರಷ್ಟು ಸಹಾಯಧನ ದೊರೆಯುತ್ತದೆ.

ಕೃಷಿ ಹೊಂಡ ನಿರ್ಮಾಣಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಈ ಯೋಜನೆಯಡಿ ನೀರು ಸಂಗ್ರಹಣಾ ರಚನೆ, ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ, ಹೊಂಡದಿಂದ ನೀರು ಎತ್ತಲು ಡೀಸೆಲ್ ಅಥವಾ ಸೋಲಾರ್ ಪಂಪ್ಸೆಟ್, ಬೆಳೆಗಳಿಗೆ ನೀರು ಹಾಯಿಸಲು ಲಘು ನೀರಾವರಿ, ಕೃಷಿ ಹೊಂಡದ ಸುತ್ತಲೂ ನೆರಳು ಪರದೆ, ಮತ್ತು ಬದು ನಿರ್ಮಾಣ ಕಾಮಗಾರಿಗಳನ್ನು ಜಲಾನಯನ ಅಭಿವೃದ್ಧಿ ಇಲಾಖೆಯ ಯೋಜನೆ ಅಥವಾ ಉದ್ಯೋಗ ಖಾತ್ರಿ ಯೋಜನೆ ಯಡಿ ಕೈಗೊಳ್ಳಬಹುದು ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಕೆ.ವಿ.ಕೂರ್ಸೆ.

ಬೆಳೆಗಳಿಗೆ ನೀರುಣಿಸುವ ಸಂದರ್ಭ ದಲ್ಲಿ ನೀರಿನ ಸಮಸ್ಯೆ ತಲೆದೋರಿದಾಗ ಬೇರೆಯವರಿಗೆ ಹಣತೆತ್ತು ಹೊಲ, ಗದ್ದೆಗಳಿಗೆ ನೀರು ಬಿಡಬೇಕಿತ್ತು. ಕೃಷಿಹೊಂಡ ನಿರ್ಮಿಸಿಕೊಂಡರೆ ಈ ಸಮಸ್ಯೆ ನಿವಾರಣೆಯಾಗಬಹುದು ಎನ್ನುತ್ತಾರೆ ಕೃಷಿಕ ಮಂಜುನಾಥ ಗೌಡ.

*
ಪ್ರಸಕ್ತ ವರ್ಷ ಬಿದ್ದ ಮಳೆ ಪ್ರಮಾಣ ಕಡಿಮೆಯಿದ್ದರೂ ಬಿತ್ತನೆಗೆ ಅನುಕೂಲವಾಗಿದೆ. ಸಬ್ಸಿಡಿ ದರದಲ್ಲಿ ರೈತರಿಗೆ ಭತ್ತದ ಬೀಜ ವಿತರಿಸುವ ಕಾರ್ಯ  ಆರಂಭಗೊಂಡಿದೆ.
-ಕೆ.ವಿ.ಕೂರ್ಸೆ,
ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT