ADVERTISEMENT

ಭದ್ರತೆಯ ನಡುವೆ ಟಿಪ್ಪು ಜಯಂತಿ, ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:59 IST
Last Updated 11 ನವೆಂಬರ್ 2017, 6:59 IST

ಸಿದ್ದಾಪುರ: ತಾಲ್ಲೂಕು ಆಡಳಿತದ ಆಶ್ರಯದಲ್ಲಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಟಿಪ್ಪು ಜಯಂತಿಯನ್ನು ಪೊಲೀಸರ ಭದ್ರತೆಯ ನಡುವೆ ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಎಪಿಎಂಸಿ ಅಧ್ಯಕ್ಷ ಕೆ.ಜಿ.ನಾಗರಾಜ, ‘ಟಿಪ್ಪು ಸುಲ್ತಾನ್ ಮತಾಂಧ ಎಂದು ಬಿಂಬಿಸುವುದು ಸರಿಯಲ್ಲ. ಆತನನ್ನು ಸ್ವಾತಂತ್ರ್ಯಯೋಧ ಎಂದು ಬಿಂಬಿಸಬೇಕು. ಇತಿಹಾಸವನ್ನು ತಮಗೆ ಬೇಕಾದ ಹಾಗೆ ತಿರುಚುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ. ಸಮಾಜದ ಸ್ವಾಸ್ಥ್ಯ ಉತ್ತಮವಾಗಿರಬೇಕಾದರೆ ಎಲ್ಲರೂ ಸೌಹಾರ್ದದಿಂದ ಬದುಕುವುದು ಅಗತ್ಯ’ ಎಂದರು.

ತಹಶೀಲ್ದಾರ್ ಪಟ್ಟರಾಜ ಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಇಒ ಶ್ರೀಧರ ಭಟ್, ಪಟ್ಟಣದ ಜಾಮೀಯಾ ಮಸೀದಿ ಕಮಿಟಿ ಅಧ್ಯಕ್ಷ ಮೆಹಬೂಬ್ ಅಲಿ, ಕೃಷಿ ಸಹಾಯಕ ನಿರ್ದೇಶಕ ಆರ್.ಪಿ.ಹೆಗಡೆ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಂದಕುಮಾರ ಪೈ ಇದ್ದರು. ರವಿ ನಾಯ್ಕ ಸ್ವಾಗತಿಸಿದರು. ಎಂ.ವಿ.ನಾಯ್ಕ ನಿರೂಪಿಸಿದರು. ಪಿಐ ಜಯಂತ್ ನೇತೃತ್ವದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು.

ಬಿಜೆಪಿ ಪ್ರತಿಭಟನೆ: ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದ ಸಂದರ್ಭದಲ್ಲಿಯೇ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಗೇರಿ, ‘ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಯಂತಿ ಮಾಡುತ್ತಿದ್ದಾರೆ. ಟಿಪ್ಪು ವಿವಾದಿತ ವ್ಯಕ್ತಿತ್ವ ಹೊಂದಿದ್ದವನು. ಆತ ಹಿಂದೂಗಳ ವಿರೋಧಿಯಾಗಿದ್ದ. ಆತನಿಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇರಲಿಲ್ಲ’ ಎಂದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ಪಟ್ಟಣ ಪಂಚಾಯ್ತಿ ಸದಸ್ಯರಾದ ಗುರುರಾಜ ಶಾನಭಾಗ, ಮಾರುತಿ ನಾಯ್ಕ ಇದ್ದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಕೆಲ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.