ADVERTISEMENT

ಮದ್ಯ, ಸಿಗರೇಟ್‌ಪ್ರಿಯ ಖಾಪ್ರಿ ದೇವರು!

ಕೋಡಿಬಾಗ್‌ ದೇವಸ್ಥಾನದಲ್ಲಿ ವಿಜೃಂಭಣೆ: ವಾರ್ಷಿಕ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 12:36 IST
Last Updated 6 ಮಾರ್ಚ್ 2017, 12:36 IST
ಕಾರವಾರ: ಮದ್ಯ, ಸಿಗರೇಟ್‌ಪ್ರಿಯ ಎಂದೇ ಪ್ರಸಿದ್ಧಿ ಪಡೆದ ಖಾಪ್ರಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಭಾನುವಾರ ಇಲ್ಲಿನ ಕೋಡಿಬಾಗ್‌ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಿತು. 
 
ದೇವರ ದರ್ಶನ ಪಡೆಯಲು ದೇವಸ್ಥಾನದ ಬಳಿ ಭಕ್ತರು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನೆರವೇರಿತು. ಬಳಿಕ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲಾಯಿತು. ಕೆಲ ಭಕ್ತರು ಹಣ್ಣು, ಕಾಯಿ, ಹೂವಿನ ಜತೆಗೆ ಮದ್ಯದ ಬಾಟಲಿ ಹಾಗೂ ಸಿಗರೇಟನ್ನು ನೈವೇದ್ಯವಾಗಿ ದೇವರಿಗೆ ಅರ್ಪಿಸಿದರು.
 
ಅರ್ಚಕರು ಗರ್ಭಗುಡಿಗೆ ತೆರಳಿ ಅಲ್ಲಿ ಮರೆಯಲ್ಲಿದ್ದ ದೇವರ ಚಿಕ್ಕ ಮೂರ್ತಿಗೆ ಮದ್ಯದ ಅಭಿಷೇಕ ಮಾಡಿದರು. ಉಳಿದಿದ್ದನ್ನು ಭಕ್ತರು ಪ್ರಸಾದವಾಗಿ ಮನೆಗೆ ಕೊಂಡೊಯ್ದರು. ಇನ್ನೂ ಕೆಲ ಭಕ್ತರು ಸಂಪ್ರದಾಯದಂತೆ ದೇವಸ್ಥಾನ ಬಳಿಯಲ್ಲಿ ಕೋಳಿಗಳನ್ನು ಬಲಿ ನೀಡಿದರು. 
 
ಪವಾಡ ಪುರುಷ: 
ದಕ್ಷಿಣ ಆಫ್ರಿಕಾದಿಂದ ಇಲ್ಲಿನ ಕೋಡಿಬಾಗಕ್ಕೆ ನೂರಾರು ವರ್ಷಗಳ ಹಿಂದೆ ಬಂದಿದ್ದ ಸಂತನೊಬ್ಬ ಈ ಪ್ರದೇಶದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದ. ಆಸ್ತಿಕರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಆತನನ್ನು ಸ್ಥಳೀಯರು ದೇವರಂತೆ ಕಾಣುತ್ತಿದ್ದರು.

ಆತನ ಮರಣಾನಂತರ ಕಾಳಿ ಸೇತುವೆ ಸಮೀಪದಲ್ಲಿ ಸ್ಥಳೀಯರು ಭವ್ಯ ಗುಡಿ ನಿರ್ಮಾಣ ಮಾಡಿ, ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆ ಸಂದರ್ಭದಲ್ಲಿ ಖಾಪ್ರಿ ದೇವರಿಗೆ ಪ್ರಿಯವಾದ ಮದ್ಯ, ಸಿಗರೇಟನ್ನು ನೇವೈದ್ಯ ರೂಪದಲ್ಲಿ ಅರ್ಪಿಸಲಾಗುತ್ತಿದೆ. 
 
‘ಇಲ್ಲಿನ ಕಾಳಿ ಸೇತುವೆಯ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿಯೇ ಈ ಗುಡಿ ಇದೆ. ರಸ್ತೆ ಅಪಘಾತ ಹಾಗೂ ಹೆಚ್ಚಿನ ಸಾವು ನೋವು ಆಗದಂತೆ ಈ ಖಾಪ್ರಿ ದೇವರು ತಡೆಯುತ್ತಾನೆ ಎಂಬ ನಂಬಿಕೆ ಎಲ್ಲರದ್ದಾಗಿದೆ.  ಹೀಗಾಗಿಯೇ ಜಾತ್ರೆ ವೇಳೆ ವಿಶೇಷ ಪೂಜೆ ಜತೆಗೆ ನೇವೈದ್ಯ ಸಮರ್ಪಿಸಿ ಕೃತಾರ್ಥರಾಗುತ್ತೇವೆ’ ಎನ್ನುತ್ತಾರೆ ಸ್ಥಳೀಯ ಮಹೇಶ್‌ ಥಾಮ್ಸೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.