ADVERTISEMENT

ಮಳೆ ಏರಿಳಿತದಿಂದ ರೈತರು ಭತ್ತದಿಂದ ವಿಮುಖ

​ಪ್ರಜಾವಾಣಿ ವಾರ್ತೆ
Published 23 ಮೇ 2017, 9:22 IST
Last Updated 23 ಮೇ 2017, 9:22 IST

ಮುಂಡಗೋಡ: ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣದಲ್ಲಿ ಏರಿಳಿತ ಆಗುತ್ತಿ ರುವುದರಿಂದ, ಭತ್ತದ ಕಣಜ ತುಂಬಿ ಸಲು ರೈತರು ಹಿಂದೇಟು ಹಾಕುತ್ತಿದ್ದು, ಅಲ್ಪ ಮಳೆಯಲ್ಲಿ ಬಂಪರ್‌ ಬೆಳೆ ತೆಗೆಯಬಹುದಾದ ಗೋವಿನಜೋಳ (ಮೆಕ್ಕೆಜೋಳ) ದತ್ತ ಹೆಚ್ಚಿನ ಒಲವು ತೋರುತ್ತಿರುವುದು ಕಡುಬಂದಿದೆ.

ಶೇ 85ರಷ್ಟು ಭತ್ತದ ಗದ್ದೆಗಳನ್ನೇ ಕಾಣಬಹುದಾಗಿದ್ದ ತಾಲ್ಲೂಕಿನಲ್ಲಿ, ಕಳೆದ ಕೆಲ ವರ್ಷಗಳಿಂದ ಶುಂಠಿ, ಹತ್ತಿ, ಗೋವಿನಜೋಳ, ಕಬ್ಬು ಗದ್ದೆಗಳಾಗಿ ಮಾರ್ಪಟ್ಟಿವೆ. ಸಾಂಪ್ರದಾಯಿಕ ಭತ್ತದ ಬೆಳೆಯಿಂದ ರೈತರು ವಿಮುಖಗೊಳುತ್ತಿ ರುವುದಕ್ಕೆ ನಿದರ್ಶನವಾಗಿದೆ. ವರುಣನ ಮುನಿಸು ಭತ್ತದ ಬೆಳೆಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಭತ್ತ ಬೆಳೆಯಲು ರೈತರು ಆಲೋಚಿಸುವಂತೆ ಮಾಡಿವೆ.

ಕಡಿಮೆ ಖರ್ಚು ಇಳುವರಿ ಜಾಸ್ತಿ: ಗೋವಿನಜೋಳ ಬೆಳೆಗೆ ಕಡಿಮೆ ಮಳೆ ಬಿದ್ದರೂ ಉತ್ತಮ ಇಳುವರಿ ಪಡೆಯಬಹುದು. ಗೋವಿನಜೋಳ ಬೆಳೆಗೆ ಮಾಡುವ ಖರ್ಚು, ಭತ್ತಕ್ಕೆ ಹೋಲಿಸಿದರೆ ಕಡಿಮೆ ಬರುತ್ತದೆ. ಒಂದೆಡೆ ಮಳೆ ಪ್ರಮಾಣದಲ್ಲಿ ಇಳಿಕೆ, ಕಡಿಮೆ ಖರ್ಚು ಮಾಡಿದರೂ, ಉತ್ತಮ ಇಳುವರಿ ಪಡೆಯಲು ಸಾಧ್ಯವಿರುವಾಗ, ಸಹಜವಾಗಿಯೇ ರೈತರು ಸಾಂಪ್ರ ದಾಯಿಕ ಭತ್ತದಿಂದ ದೂರ ಸರಿದು,  ಅರೆಮಲೆನಾಡು ಪ್ರದೇಶದ ಬೆಳೆಯಲ್ಲದ ಗೋವಿನಜೋಳದತ್ತ ಮುಖ ಮಾಡುತ್ತಿದ್ದಾರೆ.

ADVERTISEMENT

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬೇಡಿಕೆ: ಕಳೆದ ನಾಲ್ಕು ವರ್ಷಗಳಿಂದ ತಾಲ್ಲೂಕಿನ ರೈತರು ಗೋವಿನಜೋಳ ಬೆಳೆಯತ್ತ ಆಸಕ್ತಿ ತೋರುತ್ತಿರುವುದ ರಿಂದ, ಪ್ರತಿವರ್ಷ ಶೇ 10–15ರಷ್ಟು ಗೋವಿನಜೋಳ ಬೆಳೆಯುವ ಪ್ರದೇಶ ಹೆಚ್ಚಾಗುತ್ತಿದೆ. 

‘ಭತ್ತ ಬೆಳೆಯಲು ಸರಾಸರಿ ಸಾವಿರ ಮಿ.ಮೀ ಮಳೆಯ ಅವಶ್ಯಕತೆಯಿದೆ. ಗೋವಿನಜೋಳ ಬೆಳೆಗೆ 650–700 ಮಿ. ಮೀ ಮಳೆ ಸುರಿದರೆ, ಉತ್ತಮ ಇಳುವರಿ ಪಡೆಯಬಹುದು. ಕಳೆದ 3–4 ವರ್ಷ ಗಳಲ್ಲಿ 600–750 ಮಿ.ಮೀ ಆಸುಪಾಸಿ ನಲ್ಲಿ ಮಳೆ ಸುರಿದಿರುವುದರಿಂದ, ಭತ್ತ ಬೆಳೆದ ರೈತರು ಕೈಸುಟ್ಟುಕೊಂಡಿದ್ದಾರೆ, ಭತ್ತಕ್ಕೆ ಹೆಚ್ಚು ದುಡಿಮೆ, ಬಂಡವಾಳ, ಹೆಚ್ಚು ದಿನಗಳವರೆಗೆ ಕಾಯಬೇಕು.

ಇಷ್ಟೆಲ್ಲ ಮಾಡಿಯೂ ಉತ್ತಮ ಬೆಳೆ ಬರ ದಿದ್ದರೇ, ರೈತ ಮತ್ತೇ ಭತ್ತ ಬೆಳೆಯಲು ಹಿಂದೇಟು ಹಾಕುವುದು ಸಹಜ. ಸದ್ಯಕ್ಕೆ ತಾಲ್ಲೂಕಿನಲ್ಲಿ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಭತ್ತ ಬೆಳೆಯುತ್ತಿದ್ದ ಹಲವು ರೈತರು ಗೋವಿನಜೋಳದತ್ತ ಮುಖ ಮಾಡಿರುವುದನ್ನು ಕಾಣಬಹುದಾಗಿದೆ’ ಎಂದು  ಕೃಷಿ ಅಧಿಕಾರಿ ಅರವಿಂದ ಕಮ್ಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷಕ್ಕಿಂತ 100–150 ಕ್ವಿಂಟಲ್‌ ಹೆಚ್ಚಿಗೆ ಗೋವಿನಜೋಳ ಬೀಜ ತರಿಸಲಾಗಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಇಲ್ಲಿಯ ಕೃಷಿ ಇಲಾಖೆಯಲ್ಲಿ ವಿವಿಧ ತಳಿಗಳಾದ  ಅಭಿಲಾಷ್‌, ಇಂಟಾನ್‌, ಜಯಾ, ಜೆಜಿಎಲ್‌, ಬಿಪಿಟಿ, ಎಂಟಿಯು–1001, 1010 ಹಾಗೂ ಸಿಪಿ–818, 828, ರಾಶಿ, ಮಹಾರಾಜ, ಬಯೋಸೀಡ್‌ ತಳಿಯ ಮೆಕ್ಕೆಜೋಳದ ಬೀಜಗಳನ್ನು ವಿತರಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.