ADVERTISEMENT

‘ಮಹಿಳೆಯರು ರಾಜಕೀಯ ವಿಷಯ ಚರ್ಚಿಸಲಿ’

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ: 20 ಕ್ಕೂ ಅಧಿಕ ಮಹಿಳೆಯರು ಪಕ್ಷಕ್ಕೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 10:54 IST
Last Updated 18 ಫೆಬ್ರುವರಿ 2017, 10:54 IST
ಕಾರವಾರ: ಮಹಿಳೆಯರು ಅಕ್ಕ–ಪಕ್ಕದ ಮನೆಯಲ್ಲಿ ನಡೆದ ವಿಷಯಗಳನ್ನು ಚರ್ಚಿಸುವ ಬದಲು ರಾಜಕೀಯ ವಿಷಯಗಳ ಮೇಲೆ ಹೆಚ್ಚೆಚ್ಚು ಚರ್ಚೆ ನಡೆಸಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
 
ಶುಕ್ರವಾರ ನಗರದಲ್ಲಿ ನಡೆದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 
 
ಮಹಿಳೆಯರು ಆಸಕ್ತಿವಹಿಸಿ ರಾಜಕೀಯದಲ್ಲಿ ಪ್ರವೇಶಿಸಬೇಕು. ರಾಜಕೀಯಕ್ಕೆ ಬಂದರೆ ಬೇರೆಯವರು ಏನು ಹೇಳುತ್ತಾರೋ ಎಂಬ ಯೋಚನೆಯನ್ನು ಮಾಡುವುದನ್ನು ಬಿಡಬೇಕು. ನಾಯಿ ಬೊಗಳುತ್ತಲೇ ಇರುತ್ತದೆ ಅಂದ ಮಾತ್ರಕ್ಕೆ ದೇವಲೋಕ ಹಾಳಾಗುವುದಿಲ್ಲ. ಧೈರ್ಯದಿಂದ ಹೆಜ್ಜೆ ಇಟ್ಟು ಮುನ್ನುಗ್ಗುವವರಿಗೆ ಯಾವತ್ತೂ ಶತ್ರುಗಳು ಇರುತ್ತಾರೆ. ಅವರನ್ನು ಮೆಟ್ಟಿ ನಿಂತವ ಗೆಲ್ಲುತ್ತಾನೆ ಎಂದರು.
 
ಜಿಲ್ಲಾ ಪಂಚಾಯ್ತಿ ಸದಸ್ಯೆ ಗಾಯತ್ರಿ ಗೌಡ ಮಾತನಾಡಿ, ಜಾನಪದ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದರುವ ಸುಕ್ರಜ್ಜಿ ಎಲ್ಲ ಮಹಿಳೆಯರಿಗೂ ಮಾದರಿ. ಜಿಲ್ಲೆಯಲ್ಲಿ ಜಾನಪದ ಅಕಾಡೆಮಿಯ ಸ್ಥಾಪನೆಯ ಕುರಿತು ಈ ಹಿಂದೆ ಚರ್ಚೆ ನಡೆಸಲಾಗಿತ್ತು. ಜಿಲ್ಲೆಯಲ್ಲಿ ಅಕಾಡೆಮಿ ಪ್ರಾರಂಭವಾದರೆ ಸುಕ್ರಿ ಗೌಡರಂತಹ ಅನೇಕ ಜಾನಪದ ಕಲಾವಿದರಿಗೆ ಸಹಕಾರಿಯಾಗಲಿದೆ ಎಂದರು. 
 
ಸುಕ್ರಜ್ಜಿಗೆ ಸನ್ಮಾನ: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅಂಕೋಲಾದ ಜಾನಪದ ಕಲಾವಿದೆ ಸುಕ್ರಿ ಬೊಮ್ಮು ಗೌಡ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ಬಿಜೆಪಿಗೆ ಸೇರ್ಪಡೆಗೊಂಡ 20 ಅಧಿಕ ಮಹಿಳೆಯರಿಗೆ ಅನಂತಕುಮಾರ ಹೆಗಡೆ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. 
 
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕೋಶಾಧ್ಯಕ್ಷೆ ನಯನಾ ಲೀಲಾವರ, ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಗೌಡ, ರಾಜ್ಯ ಸಮಿತಿ ಸದಸ್ಯೆ ರೂಪಾಲಿ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಾ ನಾಯ್ಕ ಉಪಸ್ಥಿತರಿದ್ದರು.
 
ಕಾಂಗ್ರೆಸ್‌ನವರು ರಾಜೀನಾಮೆ ನೀಡಲಿ: ರಾಜ್ಯದ ಜನರು ಕಾಂಗ್ರೆಸ್‌ ದಬ್ಬಾಳಿಕೆಯನ್ನು ಸಹಿಸಿಕೊಂಡು ಸೋತು ಹೋಗಿದ್ದಾರೆ. ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬರ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾಗಿದ್ದು, ರಾಜ್ಯದ ಎಲ್ಲೆಡೆ ನೀರಿನ ಕ್ಷಾಮ ಉಂಟಾಗಿದೆ. ನೈತಿಕತೆ ಇದ್ದರೆ ಕಾಂಗ್ರೆಸ್‌ನವರು ರಾಜೀನಾಮೆ ಕೊಡಲಿ ಎಂದು ಸಂಸದ ಅನಂತಕುಮಾರ್‌ ಹೆಗಡೆ ಸವಾಲು ಹಾಕಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ನಡುವಿನ ಕಿತ್ತಾಟದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರಿಬ್ಬರದು ಗಂಡ–ಹೆಂಡಿರ ಜಗಳ’ ಎಂದು ವ್ಯಂಗ್ಯವಾಗಿ ಹೇಳಿದರು.

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಲಿದ್ದು, ರಾಜ್ಯದ ಚುನಾವಣೆಗೂ ಕೂಡ ಈಗಲೇ ಸಿದ್ಧರಾಗಿದ್ದೇವೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್‌ ಬೇಕು ಅಥವಾ ಬೇಡವೇ ಎನ್ನುವ ಕುರಿತು ಸ್ಥಳೀಯ ಕಾರ್ಯಕರ್ತರು ನಿರ್ಧಾರ ಮಾಡಲಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಜಿಲ್ಲೆಯ ಕಾಂಗ್ರೆಸ್‌ನ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಯಾರ್‍್ಯಾರು, ಎಷ್ಟು ಮಂದಿ ಎನ್ನುವ ಚಿತ್ರಣ ಶೀಘ್ರದಲ್ಲೇ ತಿಳಿಯಲಿದೆ ಎಂದರು.
 
* ರಾಜ್ಯದಲ್ಲಿ ಎದುರಾಗಿರುವ ನೀರಿನ ಬವಣೆಯನ್ನು ಸಮರ್ಪಕವಾಗಿ ಪರಿಹರಿಸಲು ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ
-ಅನಂತಕುಮಾರ ಹೆಗಡೆ, ಸಂಸದ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.