ADVERTISEMENT

ಮೀನುಗಾರರಿಗೆ ತೊಂದರೆ ಇಲ್ಲ: ಭರವಸೆ

ತದಡಿ ಬಂದರು ಕಾಮಗಾರಿ ಸ್ಥಳಕ್ಕೆ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:35 IST
Last Updated 9 ಮಾರ್ಚ್ 2017, 11:35 IST
ಗೋಕರ್ಣ: ಇಲ್ಲಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ತದಡಿ ಬಂದರನ್ನು ವಾಣಿಜ್ಯ ಉದ್ಯಮ ಉದ್ದೇಶಕ್ಕಾಗಿ ಬಳ ಸಲು ಅಭಿವೃದ್ಧಿ ಪಡಿಸುವ ಉದ್ದೇಶ ದಿಂದ ಬಂದರನ್ನು ಪರಿಶೀಲಿಸಲು ಬಂದರು ಮತ್ತು ಲೋಕೋಪಯೋಗಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಅಧಿಕಾರಿಗಳ ತಂಡದೊಂದಿಗೆ ಬುಧವಾರ ಭೇಟಿಯಿತ್ತು ಪರಿಶೀಲಿಸಿದರು.
 
ಈ ಸಂದರ್ಭದಲ್ಲಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ತದಡಿ ಬಂದರು ವಾಣಿಜ್ಯೋದ್ಯಮದ ಬೃಹತ್ ಬಂದರು ನಿರ್ಮಾಣಕ್ಕೆ ಯೋಗ್ಯವಾಗಿದೆ. ಈಗಾಗಲೇ 1800 ಎಕರೆ ಪ್ರದೇಶ ಸರ್ಕಾರದ ವಶದಲ್ಲಿದೆ. ಒಟ್ಟು ₹ 3800 ಕೋಟಿಗಳ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು.  
 
ಮೀನುಗಾರರ  ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಸ್ಥಳೀಯ ಮೀನುಗಾರರ ಸ್ವಹಿತಾಸಕ್ತಿಯನ್ನು ಕಾಪಾಡಲಾಗುವುದು. ಮೀನುಗಾರರಿಗೆ ಯಾವುದೇ ಸಮಸ್ಯೆ ಉಂಟಾಗದೇ ಬಂದರು ಅಭಿವೃದ್ಧಿ ಪಡಿಸಲಾಗುವುದು. ಆದರೆ ಬೃಹತ್ ಬಂದರಿನ ಕಾಮಗಾರಿ ಎಲ್ಲಿಂದ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೇ ನುಣಚಿಕೊಂಡರು. 
 
 ನಂತರ ಸಚಿವರು ಅಘನಾಶಿನಿ ನದಿ ಮತ್ತು ಸಮುದ್ರ ಸೇರುವ ಅಳವೆ ಪ್ರದೇಶವನ್ನು ಮೇಲಿಂದ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಚಿವರ ಸಂಗಡ ಇದ್ದ ಸ್ಥಳೀಯ ಶಾಸಕಿ ಹಾಗೂ ಕರಾವಳಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ ಅಳಿವೆ ಪ್ರದೇಶ ಹೂಳಿನಿಂದ ತುಂಬಿದ್ದು ಕೂಡಲೇ ಹೂಳೆತ್ತುವ ಅಗತ್ಯತೆ ಇದೆ ಎಂದು ಸಚಿವರಲ್ಲಿ ವಿನಂತಿಸಿದರು.                          
ಬಂದರು ಪ್ರದೇಶವನ್ನು ಕೇವಲ ಐದು ನಿಮಿಷದಲ್ಲಿ ನೋಡಿ ಮುಗಿಸಿದ ಸಚಿವರ ನಡುವಳಿಕೆ ಸ್ಥಳೀಯ ಮೀನುಗಾರರಿಗೆ ಬೇಸರ ಉಂಟು ಮಾಡಿತು. ಸಚಿವರು ಕೇವಲ ಕಾಟಾಚಾರಕ್ಕೆ ಭೇಟಿಯಿತ್ತಂತೆ ಭಾಸವಾಯಿತು. ಈ ಸಂದರ್ಭದಲ್ಲಿ ಭಟ್ಕಳ ಶಾಸಕ ಮಂಕಾಳು ವೈದ್ಯ, ಗ್ರಾಮ ಪಂಚಾಯ್ತಿ ಸದಸ್ಯೆ ಪಾರ್ವತಿ ನಾಯ್ಕ,ಉಪವಿಭಾಧಿಕಾರಿ ರಮೇಶ ಕಳಸದ, ಕಾಂಗ್ರೆಸ್ ಮುಖಂಡ ಮೋಹನ ನಾಯಕ ಇದ್ದರು.

ವಾಣಿಜ್ಯ ಬಂದರಿಗೆ ಭೇಟಿ
ಕಾರವಾರ:
ಇಲ್ಲಿನ ವಾಣಿಜ್ಯ ಬಂದರಿನ ವರಮಾನವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಸಿದ್ಧವಾಗಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಚ್.ಸಿ. ಮಹಾದೇವಪ್ಪ ಹೇಳಿದರು.

ಕಾರವಾರ ವಾಣಿಜ್ಯ ಬಂದರಿಗೆ ಬುಧವಾರ ಸಂಜೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ  ಸುದ್ದಿಗಾರರ ಜತೆಗೆ ಮಾತನಾಡಿದರು. ₹ 125 ಕೋಟಿ ವೆಚ್ಚದಲ್ಲಿ 820 ಮೀ. ಉದ್ದದ ತಡೆಗೋಡೆ ನಿರ್ಮಾಣ ಕಾರ್ಯ ಶೀಘ್ರವೇ ಆರಂಭ ಗೊಳ್ಳಲಿದೆ. ₹  3.40 ಕೋಟಿ ವೆಚ್ಚದಲ್ಲಿ ಬಂದರು ಪ್ರದೇಶದಲ್ಲಿ ಸರಕು ಸಂಗ್ರಹಣಾ ಗೋದಾಮು ನಿರ್ಮಾಣ, ₹  33 ಕೋಟಿ ವೆಚ್ಚದಲ್ಲಿ 8.5 ಮೀಟರ್‌ ಹೂಳೆತ್ತುವ ಕಾರ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.