ADVERTISEMENT

ಮೀನು ಮಾರುಕಟ್ಟೆಗೆ ಶೀಘ್ರ ಭೂಮಿಪೂಜೆ

ಕಾರವಾರ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಶಾಸಕ ಸತೀಶ ಸೈಲ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:42 IST
Last Updated 8 ಫೆಬ್ರುವರಿ 2017, 9:42 IST

ಕಾರವಾರ: ಹಳೆಯ ಜಾಗದಲ್ಲಿಯೇ ನೂತನ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ನಗರಸಭೆ ಅನುಮೋದನೆ ನೀಡಿದ್ದು, ಶೀಘ್ರದಲ್ಲಿಯೇ ಅಡಿಗಲ್ಲು ಹಾಕಲಾಗುವುದು ಎಂದು ಸತೀಶ್‌ ಸೈಲ್‌ ಹೇಳಿದರು.

ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೋಮವಾರ ನಗರಸಭೆ ಸಭಾಂಗಣದಲ್ಲಿ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

12 ಗುಂಟೆ ಜಾಗದಲ್ಲಿ ₹ 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಮೀನು ಮಾರುಕಟ್ಟೆಯ ನೀಲನಕ್ಷೆ ಸಿದ್ಧಗೊಂಡಿದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಹಳೆಯ ಗಾಂಧಿ ಮಾರುಕಟ್ಟೆಯನ್ನು ಕೆಡವಿ ಸುಸಜ್ಜಿತ ಸಂಕೀರ್ಣ ನಿರ್ಮಿಸುವ ಕುರಿತು ಯೋಜನೆ ರೂಪಿಸಲಾಗಿದೆ.

ಅನುದಾನದ ಕೊರತೆ ಇರುವುದರಿಂದ ಮೊದಲ ಹಂತದಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು. ಮುಂದಿನ ಹಂತದಲ್ಲಿ ಗಾಂಧಿ ಮಾರುಕಟ್ಟೆ ತೆರವು ಕಾರ್ಯ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯರಸ್ತೆಯಿಂದ ಸುಮಾರು 15 ಅಡಿಯಷ್ಟು ಜಾಗ ಬಿಡಲಾಗುತ್ತಿದೆ. ಇದರಿಂದ 150 ಕಾರುಗಳ ಪಾರ್ಕಿಂಗ್‌ಗೆ ಅವಕಾಶವಿರುತ್ತದೆ. ನೆಲ ಮಹಡಿಯಲ್ಲಿ 350 ಮಂದಿ ಮೀನುಗಾರ ಮಹಿಳೆಯರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಮೊದಲ ಮಹಡಿಯಲ್ಲಿ ಒಣ ಮೀನು ಮಾರುಕಟ್ಟೆ ಹಾಗೂ ಅಂಗಡಿಗಳಿಗೆ ಅವಕಾಶ ನೀಡಲಾಗುವುದು ಎಂದರು.

ನಗರೋತ್ಥಾನ 3ನೇ ಹಂತದ ಯೋಜನೆಯಡಿ ₹ 5 ಕೋಟಿಯನ್ನು ಎರಡನೇ ಹಂತದ ಕಾಮಗಾರಿಗೆ ಮೀಸಲಿರಿಸಲು ಯೋಜಿಸಲಾಗಿದೆ. ಮೀನು ಮಾರುಕಟ್ಟೆಯ ಒಳಾಂಗಣ ನಿರ್ಮಾಣ ಪೂರ್ವದಲ್ಲಿ ನಗರಸಭೆ ಹಾಗೂ ಮೀನು ಮಾರಾಟಗಾರ ಮಹಿಳೆಯರು ಸಮಿತಿಯೊಂದು ಗೋವಾ, ಉಡುಪಿ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಲಿ ಎಂದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ. ಸ್ಥಾಯಿ ಸಮಿತಿ ಅಧ್ಯಕ್ಷೆ ನೇಹಾ ನಾಯ್ಕ, ಪೌರಾಯುಕ್ತ ಆರ್.ವಿ.ಜತ್ತನ್ನ ಹಾಗೂ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT