ADVERTISEMENT

ಮೂಲಹಕ್ಕುಗಳ ರಕ್ಷಣೆಗೆ ‘ಕಾಳಿ ಬ್ರಿಗೇಡ್‌’

ವಿವಿಧ ಯೋಜನೆಗಳಿಂದ ನಲುಗಿರುವ ಜೊಯಿಡಾ ತಾಲ್ಲೂಕಿನ ಜನರು; ಹೋರಾಟಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:44 IST
Last Updated 8 ಫೆಬ್ರುವರಿ 2017, 9:44 IST

ಕಾರವಾರ: ಕಾಳಿ ಹುಲಿ ಸಂರಕ್ಷಿತಾ ಪ್ರದೇಶ ಹಾಗೂ ಇನ್ನಿತರೆ ಯೋಜನೆಗಳಿಂದ ಜೊಯಿಡಾ ತಾಲ್ಲೂಕು ನಿವಾಸಿಗಳ ಮೂಲ ಹಕ್ಕುಗಳಿಗೆ ಧಕ್ಕೆಯಾಗಿದ್ದು, ಅವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ‘ಕಾಳಿ ಬ್ರಿಗೇಡ್‌’ ಹುಟ್ಟುಹಾಕಿದ್ದೇವೆ ಎಂದು ಬ್ರಿಗೇಡ್‌ ಸಂಚಾಲಕ ರವಿ ರೇಡ್ಕರ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಾತೀತವಾಗಿ ಈ ಕಾಳಿ ಬ್ರಿಗೇಡ್‌ ಸ್ಥಾಪಿಸಿದ್ದು, ಈಗಾಗಲೇ ನೂರಾರು ಮಂದಿ ಇದಕ್ಕೆ ಕೈಜೋಡಿಸಿದ್ದಾರೆ. ಹಲವು ಯೋಜನೆಗಳಿಂದ ಈಗಾಗಲೇ ನಲುಗಿರುವ ಜೊಯಿಡಾ ತಾಲ್ಲೂಕಿನ ಜನರ ಹಕ್ಕುಗಳ ರಕ್ಷಣೆ ಮಾಡುವುದು ಇದರ ಮುಖ್ಯ ಗುರಿಯಾಗಿದೆ. ಅಲ್ಲದೇ ಮೂಲ ಹಕ್ಕುಗಳನ್ನು ಕಸಿದುಕೊಳ್ಳುವ ಅಧಿಕಾರಿಗಳ ವಿರುದ್ಧ ಸಹ ಹೋರಾಟ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ಅಧಿಕಾರಿಗಳಿಂದಲೇ ಲೂಟಿ:  ಅರಣ್ಯ ಹಾಗೂ ಪರಿಸರದ ಮೇಲೆ ಸ್ಥಳೀಯರ ಜನರಿಂದ ಯಾವುದೇ ಧಕ್ಕೆಯಾಗಿಲ್ಲ. ಬದಲಾಗಿ ವಿವಿಧ ಯೋಜನೆಗಳ ಹೆಸರಲ್ಲಿ ಅಧಿಕಾರಿಗಳೇ ಅರಣ್ಯವನ್ನು ಲೂಟಿ ಮಾಡುತ್ತಿದ್ದಾರೆ. ಹಿಂದೆ ಸೂಪಾ ಅಣೆಕಟ್ಟು ನಿರ್ಮಾಣ ಮಾಡಿ ಕೇವಲ 100 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಮಾಡಲು ಸಂಪತ್ಭರಿತ 47 ಹಳ್ಳಿಗಳನ್ನು ಮುಳುಗಡೆ ಮಾಡಲಾಯಿತು ಎಂದರು.

ಅಲ್ಲದೇ ಈ ಅರಣ್ಯ ವ್ಯಾಪ್ತಿಯಲ್ಲಿ ಇರುವ ಕೇವಲ ನಾಲ್ಕು ಹುಲಿಗಳ ರಕ್ಷಣೆಗಾಗಿ ಸ್ಥಳೀಯ ಜನರ ಮೂಲ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ದೂರಿದರು.

ಹುಲಿ ಯೋಜನೆ ಅನುಷ್ಠಾನ ಪೂರ್ವದಲ್ಲಿ ಸ್ಥಳೀಯ ಜನರಿಗೆ ಯಾವುದೇ ಮಾಹಿತಿ ನೀಡದೇ ಅಧಿಕಾರಿಗಳು ಮರೆಮಾಚಿದ್ದಾರೆ. ಇದೀಗ ಪರಿಸರ ಸೂಕ್ಷ್ಮ ವಲಯವನ್ನು (ಇಎಸ್‌ಝೆಡ್‌) ಅನುಷ್ಠಾನಗೊಳಿಸಲು ಕರಡು ಅಧಿಸೂಚನೆ ಹೊರಡಿಸಿದೆ. ಇದನ್ನು ವಿರೋಧಿಸಿ ಈಗಾಗಲೇ ಬೃಹತ್‌ ಹೋರಾಟ ನಡೆಸಿದ್ದೇವೆ. ಮುಂದೆಯೂ ಇಂಥ ಯೋಜನೆಗಳ ವಿರುದ್ಧ ಜನಾಂದೋಲನ ಜತೆಗೆ ಕಾನೂನು ಹೋರಾಟ ಕೂಡ ನಡೆಸಲಿದ್ದೇವೆ ಎಂದರು.

ಸ್ಥಳೀಯರ ಕಡೆಗಣನೆ: ಇಲ್ಲಿನ ಅರಣ್ಯದಲ್ಲಿ ಅಗಾಧವಾಗಿ ಬಿದಿರು ಇದ್ದವು. ಇದನ್ನು ಆಧರಿಸಿ ಸುಮಾರು 60 ವರ್ಷಗಳ ಹಿಂದೆ ವೆಸ್ಟ್‌ಕೋಸ್ಟ್‌ ಪೇಪರ್‌ ಮಿಲ್‌ ಕಾರ್ಖಾನೆ ಬಂತು. ಆದರೆ ಇಲ್ಲಿ ಹೊರರಾಜ್ಯದವರಿಗೆ ಹೆಚ್ಚಿನ ಉದ್ಯೋಗ ನೀಡಿದ್ದು, ಸ್ಥಳೀಯರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

‘ಜೊಯಿಡಾ ತಾಲ್ಲೂಕು ಕೇಂದ್ರ ಅಭಿವೃದ್ಧಿಗೆ 500 ಎಕರೆ ಜಮೀನು ಡಿನೋಟಿಫಿಕೇಶನ್ ಮಾಡಿ ಕೈಗಾರಿಕಾ ಪ್ರದೇಶಗಳ ಸ್ಥಾಪನೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕಿದೆ.

ಕಾಳಿ ವಿದ್ಯುತ್ ಯೋಜನೆಯಲ್ಲಿ ಪರಿಹಾರ ಲಭ್ಯವಾಗದೇ ಇರುವ ಸುಮಾರು 500–600 ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡುವುದರೊಂದಿಗೆ ಈ ಯೋಜನೆಯಿಂದ ಸರ್ಕಾರಕ್ಕೆ ಬರುವ ಆದಾಯದಲ್ಲಿ ಶೇ 5 ರಷ್ಟನ್ನು ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು.

ಎಲ್ಲ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಆಗುವ ತನಕ ಕಾಳಿ ಬ್ರಿಗೇಡ್ ಹೋರಾಟ ನಡೆಸಲಿದೆ ಎಂದರು. ಸುನಿಲ್‌ ದೇಸಾಯಿ, ಸದಾನಂದ ದೇಸಾಯಿ, ಅಜಿತ್‌, ಸತೀಶ್‌ ನಾಯ್ಕ ಹಾಜರಿದ್ದರು.

*
ದಾಂಡೇಲಿ ಹಾಗೂ ಅಣಶಿ ಅಭಯಾರಣ್ಯದಲ್ಲಿ ಅನುಷ್ಠಾನಗೊಳಿಸಿರುವ ಹುಲಿ ಯೋಜನೆ ಹಾಗೂ ಇನ್ನಿತರೆ ಯೋಜನೆಗಳನ್ನು ರದ್ದುಪಡಿಸಬೇಕು.
-ರವಿ ರೇಡ್ಕರ್‌,
ಕಾಳಿ ಬ್ರಿಗೇಡ್‌ ಸಂಚಾಲಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.