ADVERTISEMENT

ರಾಜ್ಯದ 224 ಕ್ಷೇತ್ರದಲ್ಲಿಯೂ ಆರ್‌ಪಿಐ ಸ್ಪರ್ಧೆ: ವೆಂಕಟಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 7:07 IST
Last Updated 14 ನವೆಂಬರ್ 2017, 7:07 IST

ಕಾರವಾರ: ‘ಮುಂದಿನ ವಿಧಾನಸಭಾ ಚುನಾವಣೆಗೆ ಭಾರತೀಯ ರಿಪಬ್ಲಿಕನ್ ಪಕ್ಷದಿಂದ (ಆರ್‌ಪಿಐ) ಜಿಲ್ಲೆಯ 6 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದ್ದೇವೆ’ ಎಂದು ಆರ್‌ಪಿಐನ ರಾಜ್ಯ ಸಮಿತಿ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದ್ದೇವೆ. ಕಾರವಾರ– ಅಂಕೋಲಾ ಕ್ಷೇತ್ರಕ್ಕೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಲಿಷಾ ಎಲಕಪಾಟಿ ಹಾಗೂ ಹಳಿಯಾಳ ಕ್ಷೇತ್ರದಿಂದ ಇಮ್ತಿಯಾಜ್ ಎಂಬುವವರನ್ನು ಕಣಕ್ಕಿಳಿಸಲು ಈಗಾಗಲೇ ಇಲ್ಲಿ ನಡೆದ ಜಿಲ್ಲಾ ಘಟಕದ ಸಭೆಯಲ್ಲಿ ನಿರ್ಣಯಿಸಿದ್ದೇವೆ’ ಎಂದು ತಿಳಿಸಿದರು.

ಕಾಂಗ್ರೆಸ್ ಮುಕ್ತ ಕರ್ನಾಟಕ ಸಂಕಲ್ಪ: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಜಾತಿ ತಾರತಮ್ಯ, ಕೋಮುವಾದವನ್ನು ಹುಟ್ಟು ಹಾಕುತ್ತಿದೆ. ಹೀಗಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕವೇ ನಮ್ಮ ಪಕ್ಷದ ಮೊದಲ ಗುರಿ’ ಎಂದು ತಿಳಿಸಿದರು.

ADVERTISEMENT

ಜನಾಧಿಕಾರಕ್ಕಾಗಿ ಜನಸಂಕಲ್ಪ ಜಾಥಾ: ‘ರಾಜ್ಯದಲ್ಲಿ ಈಗಾಗಲೇ ಚುನಾವಣೆ ಕಾವು ಗರಿಗೆದರಿದೆ. ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಪರಿವರ್ತನಾ ರ‍್ಯಾಲಿ, ಜೆಡಿಎಸ್ ಕುಮಾರ ಪರ್ವ ಯಾತ್ರೆಯನ್ನು ಪ್ರಾರಂಭಿಸಿದೆ. ಕಾಂಗ್ರೆಸ್‌ ‘ಮನೆ-ಮನೆಗೆ ಕಾಂಗ್ರೆಸ್’ ಅಭಿಯಾನ ಹಮ್ಮಿಕೊಂಡು ತಮ್ಮ ಪ್ರಚಾರ ಕಾರ್ಯ ಶುರು ಮಾಡಿದೆ. 

ಅದರಂತೆ ನಮ್ಮ ಪಕ್ಷವೂ ಕೂಡ, ಅವರೆಲ್ಲರಿಗಿಂತ ಭಿನ್ನವಾಗಿರುವ ರ‍್ಯಾಲಿಯೊಂದನ್ನು ಹಮ್ಮಿಕೊಂಡಿದೆ. ನವೆಂಬರ್‌ 26ರಿಂದ ‘ಜನಾಧಿಕಾರಕ್ಕೆ ಜನಸಂಕಲ್ಪ ಜಾಥಾ’ ರ‍್ಯಾಲಿ ಆರಂಭವಾಗಲಿದೆ. ಮಾನವೀಯ ಮೌಲ್ಯಗಳನ್ನು ಅರಿತವರು, ಪ್ರಜ್ಞಾವಂತ ನಾಗರಿಕರು, ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ತಡೆಯ ಬಯಸುವವರು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು. ಆರ್‌ಪಿಐ ಜಿಲ್ಲಾ ಘಟಕದ ಅಧ್ಯಕ್ಷ ಎಲಿಷಾ ಎಲಕಪಾಟಿ, ತಾಲ್ಲೂಕು ಘಟಕದ ಅಧ್ಯಕ್ಷ ಯಲ್ಲಪ್ಪ ಎನ್‌. ವಡ್ಡರ, ಇಮ್ತಿಯಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.