ADVERTISEMENT

ವನ್ಯಜೀವಿಗಳಿಗೆ ಜಲಸೇವೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:45 IST
Last Updated 19 ಏಪ್ರಿಲ್ 2017, 5:45 IST

ಶಿರಸಿ: ಕಾಡುಪ್ರಾಣಿಗಳು, ಜಾನುವಾರು­ಗಳ ಜಲದಾಹ ತಣಿಸಲು ಬಿಸಲಕೊಪ್ಪ ಗ್ರಾಮ ಪಂಚಾಯ್ತಿಯು ಉಲ್ಲಾಳ­ಕೊಪ್ಪ­ದಲ್ಲಿ ನೀರಿನ ತೊಟ್ಟಿಯನ್ನು ನಿರ್ಮಿಸಿದೆ. ನೀರು ತುಂಬಿ ತುಳುಕುವ ತೊಟ್ಟಿಗೆ ಬರುವ ಜಿಂಕೆ, ಕಡವೆ, ಕಾಡುಕುರಿ, ಮಂಗ, ನವಿಲು ಹಾಯಾಗಿ ನೀರು ಕುಡಿದು ಸಂತೃಪ್ತಿಯಿಂದ ಮರಳುತ್ತವೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ₹ 42,000 ವೆಚ್ಚದಲ್ಲಿ 17X4 ಗಾತ್ರದ ಸಿಮೆಂಟ್‌ ತೊಟ್ಟಿ ನಿರ್ಮಾಣ ಮಾಡ­ಲಾಗಿದೆ. ಇದರಲ್ಲಿ 3,000 ಲೀಟರ್ ನೀರು ಸಂಗ್ರಹಿಸಬಹುದು. ಇಲ್ಲಿನ ನಿವಾಸಿ ಎಸ್‌.ಜಿ. ಭಟ್ಟ ಅವರು ಮನೆಯ ಹಿತ್ತಲಿನಲ್ಲಿ ತೆಗೆದಿರುವ ಕೊಳವೆಬಾ­ವಿಯಿಂದ ತೊಟ್ಟಿಗೆ ನೀರು ಪೂರೈಕೆ ಮಾಡುತ್ತಾರೆ.

‘ಸುತ್ತಮುತ್ತಲಿನ ಕೆರೆಗಳೆಲ್ಲ ಒಣಗಿವೆ. ಎಲ್ಲಿಯೂ ಜಾನುವಾರು, ವನ್ಯಪ್ರಾಣಿ­ಗಳಿಗೆ ಕುಡಿಯುವ ನೀರು ಸಿಗುವುದಿಲ್ಲ. ನೀರನ್ನು ಅರಸಿ ಬರುವ ಪ್ರಾಣಿಗಳು ತೊಟ್ಟಿಯ ಬಳಿ ಬಂದು ನೀರು ಕುಡಿದು ಹೋಗುತ್ತವೆ. ಹಗಲು ವೇಳೆಯಲ್ಲೂ ಪ್ರಾಣಿಗಳು ಬರುತ್ತವೆ. ಜಾನುವಾರು ಇದೇ ನೀರನ್ನು ಕುಡಿದು ದಾಹ ಇಂಗಿಸಿಕೊಳ್ಳುತ್ತವೆ. 2–3 ದಿನಕ್ಕೊಮ್ಮೆ ನೀರನ್ನು ತುಂಬಿಸುತ್ತೇನೆ’ ಎನ್ನುತ್ತಾರೆ ಎಸ್.ಜಿ.ಭಟ್ಟ.

ADVERTISEMENT

ನೀರಿನ ಮೂಲವಿದ್ದರೆ ಪ್ರತಿ ಗ್ರಾಮಕ್ಕೊಂದು ಈ ತರದ ತೊಟ್ಟಿ ನಿರ್ಮಿಸಬಹುದು. ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ 13 ಗ್ರಾಮಗಳಲ್ಲಿ ತಲಾ ಒಂದರಂತೆ ತೊಟ್ಟಿ ನಿರ್ಮಿಸಲು ಕ್ರಿಯಾಯೋಜನೆ ರೂಪಿಸ­ಲಾಗಿದೆ. ಇನ್ನು ಒಂದು ವಾರದಲ್ಲಿ ಉಳಿದ ಗ್ರಾಮಗಳಲ್ಲಿ ನೀರಿನ ತೊಟ್ಟಿ ನಿರ್ಮಿಸುವ ಕಾಮಗಾರಿ ಪ್ರಾರಂಭಿಸ­ಲಾಗುವುದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ರಿಯಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.