ADVERTISEMENT

ವಸತಿ ಯೋಜನೆ ಅನುಷ್ಠಾನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 9:59 IST
Last Updated 16 ಜುಲೈ 2017, 9:59 IST

ಶಿರಸಿ: ಮನೆ ಹೊಂದಿರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಡವರಿಗೆ ಸೂರು ಒದಗಿಸಲು ರಾಜ್ಯ ಸರ್ಕಾರ ಅವಶ್ಯಕತೆಗೆ ಅನುಗುಣವಾಗಿ ಮನೆ ಯೋಜನೆ ಅನುಷ್ಠಾನಗೊಳಿಸಿದೆ. ಪಿಡಿಒಗಳು ಈ ಅಭಿಯಾನವನ್ನು ಸವಾಲಾಗಿ ಸ್ವೀಕರಿಸಿ ಆಗಸ್ಟ್ 15ರ ಒಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಶನಿವಾರ ಇಲ್ಲಿ ಕರೆದಿದ್ದ ಬನವಾಸಿ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮನೆ ಅಗತ್ಯವಿರುವ ಪರಿಶಿಷ್ಟರು ಆಧಾರ ಕಾರ್ಡ್‌, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಮನೆ ಸಂಖ್ಯೆ ಹಾಗೂ ಜಾತಿ ಪ್ರಮಾಣ ಪತ್ರಗಳ ದಾಖಲೆ ಒದಗಿಸಿದರೆ ಅಂಥವರನ್ನು ಯೋಜನೆ ಯಡಿ ಪರಿಗಣಿಸಬೇಕು. ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರ್ಹರಿರುವ ಎಲ್ಲ ಫಲಾನುಭವಿಗಳಿಗೆ ಮನೆ ನೀಡಬೇಕು ಎಂದು ಅವರು ಪಿಡಿಒಗಳಿಗೆ ತಿಳಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ, ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ, ರಾಜೀವ್‌ ಗಾಂಧಿ ಆವಾಸ್ ಯೋಜನೆಯಡಿ ಯಲ್ಲಾಪುರ ಕ್ಷೇತ್ರಕ್ಕೆ 5000 ಮನೆಗಳು ಮಂಜೂರು ಆಗಿವೆ. ಬಡವರಿಗೆ ಬಂದಿರುವ ಸೌಲಭ್ಯ ಒದಗಿ ಸುವಲ್ಲಿ ಪಿಡಿಒಗಳು ನಿರ್ಲಕ್ಷ್ಯ ತೋರ ಬಾರದು. ಮನೆ ಕಟ್ಟಲು ಜಾಗದ ಕೊರತೆ ಯಿದ್ದಲ್ಲಿ ಪಂಚಾಯ್ತಿ ವ್ಯಾಪ್ತಿಯ ಗಾಂವ ಠಾಣಾ ಜಾಗ ನೀಡಲು ಅವಕಾಶವಿದೆ. ಬನವಾಸಿ ಹೋಬಳಿಯ ಎಲ್ಲ 10 ಪಂಚಾಯ್ತಿಗಳಲ್ಲಿ ಇರುವ ಗಾಂವಠಾಣಾ ಜಾಗದ ಯಾದಿಯನ್ನು ಶೀಘ್ರ ನೀಡ ಬೇಕು ಎಂದು ಹೇಳಿದರು.

ADVERTISEMENT

‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬಂಕನಾಳ, ಬದನ ಗೋಡ, ಸುಗಾವಿ, ಅಂಡಗಿ, ಹಲಗದ್ದೆ ಗ್ರಾಮ ಪಂಚಾಯ್ತಿಗಳಿಗೆ ಒಟ್ಟೂ ₹ 9.80 ಕೋಟಿ ಬೆಳೆವಿಮೆ ಮಂಜೂರು ಆಗಿದೆ. ಮಂಜೂರು ಆಗಿರುವ ಹಣ ರೈತರ ಖಾತೆಗೆ ಜಮಾ ಆಗುತ್ತಿಲ್ಲ. ವಿಮೆ ವ್ಯವಸ್ಥೆ ಗೊಂದಲದ ಗೂಡಾಗಿ ಮಾರ್ಪಟ್ಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬನವಾಸಿ ಹೋಬಳಿಯಲ್ಲಿ ವಾಡಿಕೆ ಯಂತೆ ಈವರೆಗೆ 808 ಮಿ.ಮೀ ಮಳೆ ಆಗಬೇಕಾಗಿತ್ತು. ಆದರೆ 505 ಮಿ.ಮೀ ಮಾತ್ರ ಮಳೆಯಾಗಿದೆ ಎಂದು ಕೃಷಿ ಅಧಿಕಾರಿ ಬೆಳಗಾಂವಕರ ತಿಳಿಸಿದರು. ಸರ್ಕಾರಕ್ಕೆ ಬರಗಾಲದ ವರದಿ ನೀಡು ವಾಗ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಮಾನವೀಯ ನೆಲೆಯಲ್ಲಿ ಯೋಚಿಸಬೇಕು. ಕೇಂದ್ರ ಸರ್ಕಾರದ ಹೊಸ ನಿಯಮದಿಂದಾಗಿ ಬನವಾಸಿ ಭಾಗ ಬರ ಪರಿಹಾರದಿಂದ ವಂಚಿತ ವಾಗಿದೆ. ಈ ನಿಯಮ ಬದಲಾಯಿ ಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಶಾಸಕರು ಹೇಳಿದರು.

ಹಣ ಜಮಾ ಆಗುತ್ತಿಲ್ಲ: ‘ಬರಗಾಲದಿಂದ ಬನವಾಸಿ ಭಾಗದಲ್ಲಿ 233 ರೈತರ 300 ಎಕರೆ ಅಡಿಕೆ ತೋಟಗಳಿಗೆ ಶೇ 33ಕ್ಕಿಂತ ಹೆಚ್ಚು ಹಾನಿಯಾಗಿದೆ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ಗಣೇಶ ಹೆಗಡೆ ತಿಳಿಸಿದರು. ‘ನರೇಗಾ ಯೋಜನೆಯಲ್ಲಿ ನಡೆಸಿರುವ ಕಾಮಗಾರಿಯ ಹಣ ಜುಲೈ 1ರಿಂದ ಜಮಾ ಆಗುತ್ತಿಲ್ಲ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್. ಹೆಗಡೆ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.