ADVERTISEMENT

ವೈದ್ಯ, ಪತ್ರಕರ್ತ ಪರಸ್ಪರ ದೂರು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 10:31 IST
Last Updated 21 ಮಾರ್ಚ್ 2018, 10:31 IST

ಹೊನ್ನಾವರ: ಇಲ್ಲಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಪತ್ರಕರ್ತರೊಬ್ಬರ ನಡುವೆ ನಡೆದ ಜಟಾಪಟಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪರಸ್ಪರರ ವಿರುದ್ಧ ದೂರು ದಾಖಲಾಗಿದೆ.

ಘಟನೆಯ ಹಿನ್ನೆಲೆ: ತಾಲ್ಲೂಕಿನ ಕಡ್ನೀರಿನ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ತಾಲ್ಲೂಕು ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿ ಮೃತ ಮಹಿಳೆಯ ಸಂಬಂಧಿಕರು ಹಾಗೂ ವೈದ್ಯರ ನಡುವೆ ಗಲಾಟೆ ನಡೆಯುತ್ತಿತ್ತು, ಇದನ್ನು ಪತ್ರಕರ್ತ ಸುಧೀರ್‌ ನಾಯಕ್‌ ಚಿತ್ರೀಕರಿಸುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಾ.ಪ್ರಕಾಶ ನಾಯ್ಕ ಹಾಗೂ ಅವರ ಕಾರು ಚಾಲಕ ಕರ್ಕಿ ತೊಪ್ಪಲಕೇರಿಯ ಚಂದ್ರಶೇಖರ ನಾಯ್ಕ ಹಲ್ಲೆ ನಡೆಸಿದರು ಎಂದು ಪತ್ರಕರ್ತ ಹಾಗೂ ಕಡ್ನೀರು ಗ್ರಾಮದ ನಿವಾಸಿ ಸುಧೀರ ನಾಯ್ಕ ಭಾನುವಾರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಡಾ.ಪ್ರಕಾಶ ನಾಯ್ಕ ಅವರು ಕೂಡ ಪ್ರತಿ ದೂರು ಸಲ್ಲಿಸಿದ್ದಾರೆ. ‘ಮಹಿಳೆ ಸಾವಿನ ಕುರಿತು ಪ್ರಶ್ನೆ ಕೇಳುವುದಿದೆ ಎಂದು ಸುಧೀರ್‌ ನಾಯ್ಕ ಕೇಳಿದರು. ಅದಕ್ಕೆ ನಾನು ಕೆಲಸ ಮುಗಿಸಿ ಬರುತ್ತೇನೆ ಎಂದೆ ಹೇಳಿದೆ. ಆಗ ನನ್ನನ್ನು ಅಡ್ಡಗಟ್ಟಿ ಕರ್ತವ್ಯಕ್ಕೆ ತೊಂದರೆಯುಂಟು ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ವೈದ್ಯಾಧಿಕಾರಿ ಡಾ.ಪ್ರಕಾಶ ನಾಯ್ಕ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಜತೆಗೆ ಪತ್ರಕರ್ತ ಸುಧೀರ ನಾಯ್ಕ ಸೇರಿ ಇತರೆ ಮೂವರ ವಿರುದ್ಧ ಸೆಕ್ಷನ್‌ 353, 341(34ಐಪಿಸಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಹಾವು ಕಡಿದು ವ್ಯಕ್ತಿ ಸಾವು

ಗೋಕರ್ಣ : ಇಲ್ಲಿಯ ಬಂಗ್ಲೆಗುಡ್ಡಾ ನಿವಾಸಿ ಸುರೇಶ ಧಾಕು ಅಂಬಿಗ (65) ತಮ್ಮ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಪೂರಿತ ಹಾವು ಕಡಿದು ಚಿಕಿತ್ಸೆ ಫಲಿಸದೇ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.

ಹಾವು ಮೊಣಕೈ ಗಂಟಿಗೆ ಕಚ್ಚಿದೆ. ಕೂಡಲೇ ಚಿಕಿತ್ಸೆಗಾಗಿ ಕುಮಟಾ ಆಸ್ಪತ್ರೆಗೆ ಕರೆದೋಯ್ದರೂ ಪ್ರಯೋಜನವಾಗಿಲ್ಲ. ಇವರಿಗೆ ಪತ್ನಿ ಇದ್ದು, ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ.

ಬಾಲಕ ಸಾವು

ಭಟ್ಕಳ: ತಾಲ್ಲೂಕಿನ ಚೌಥನಿಯ ಶರಾಬಿ ನದಿ ದಡದಲ್ಲಿ ಆಟ ಆಡುತ್ತಿದ್ದ ಬಾಲಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.

ತಾಲ್ಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯ್ತಿ ವ್ಯಾಪ್ತಿ ಬೆಳ್ನಿಯ ಅಜಯ ನರಸಿಂಗ ಮೊಗೇರ (9) ಮೃತ ಬಾಲಕ. ಸ್ನೇಹಿತರೊಂದಿಗೆ ಶರಾಬಿ ನದಿ ಸಮೀಪ ಬಂದು ದಡದಲ್ಲಿ ಆಡುತ್ತಿದ್ದಾಗ ಘಟನೆ ನಡೆದಿದೆ. ನೀರಿನಲ್ಲಿ ಬಾಲಕ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಆತನನ್ನು ಅಲ್ಲಿಂದ ಮೇಲಕ್ಕೆ ತಂದಿದ್ದಾರೆ. ಆದರೆ ಅಸ್ವಸ್ಥಗೊಂಡಿದ್ದ ಬಾಲಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಾಯಾಳು ಲಾರಿ ಚಾಲಕ ಸಾವು

ಯಲ್ಲಾಪುರ: ಅಪಘಾತದಲ್ಲಿ ಗಾಯಗೊಂಡಿದ್ದ ಲಾರಿಯ ಚಾಲಕ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ಇಟಗಿಯ ತಾಂಡಾ ನಿವಾಸಿ ಅಶೋಕ ರಾಥೋಡ್ (28) ಮೃತಪಟ್ಟವರು. ಕಳೆದ ಶನಿವಾರ ತಾಲೂಕಿನ ಶಿರಲೆ ಕ್ರಾಸ್ ಬಳಿ ಯಲ್ಲಾಪುರದಿಂದ ಅಂಕೋಲಾ ಕಡೆ ತೆರಳುತ್ತಿದ್ದ ಲಾರಿಯು ನಿಯಂತ್ರಣ ತಪ್ಪಿ ಧರೆಗೆ ಗುದ್ದಿತ್ತು. ಇದರಿಂದ ಗಾಯಗೊಂಡಿದ್ದ ಚಾಲಕ ಮತ್ತು ಸಹ ಚಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.