ADVERTISEMENT

ಶಂಕಿತ 6 ಉಗ್ರರ ಬಂಧನ; 7 ಬಾಂಬ್‌ ವಶಕ್ಕೆ!

ವಿವಿಧ ಭದ್ರತಾ ಪಡೆಗಳಿಂದ ನಡೆದ ‘ಸಾಗರ ಕವಚ’ ಅಣಕು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 7:22 IST
Last Updated 22 ಏಪ್ರಿಲ್ 2017, 7:22 IST
ಕಾರವಾರ:  ಇಲ್ಲಿನ ಕಾಳಿ ಸೇತುವೆ, ಬಸ್‌ ನಿಲ್ದಾಣ ಹಾಗೂ ಕೈಗಾ ಅಣು ಸ್ಥಾವರವನ್ನು ಸ್ಫೋಟಿಸಲು ಸಂಚು ನಡೆಸಿದ್ದ ಒಟ್ಟು 6 ಶಂಕಿತ ಉಗ್ರರನ್ನು (ಮಾರುವೇಷದಲ್ಲಿದ್ದ ಭದ್ರತಾ ಪಡೆ ಸಿಬ್ಬಂದಿ) ಶುಕ್ರವಾರ ಬಂಧಿಸಿರುವ ಪೊಲೀಸರು, ಅವರಿಂದ 7 ಬಾಂಬ್‌ಗಳನ್ನು ವಶಕ್ಕೆ ಪಡೆದರು. 
 
ಯಾರೂ ಆತಂಕಕ್ಕೆ ಒಳಗಾಗ ಬೇಡಿ!. ಇದು ನಿಜವಾದ ಬಾಂಬ್‌ ಅಲ್ಲ. ಅಲ್ಲದೇ ಅವರು ಶಂಕಿತ ಉಗ್ರರೂ ಅಲ್ಲ. ಕರಾವಳಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸುವ ಹಾಗೂ ಪರಿಶೀಲಿಸುವ ಸಲುವಾಗಿ ವರ್ಷಕ್ಕೆ ಎರಡು ಬಾರಿ ವಿವಿಧ ಭದ್ರತಾ ಪಡೆಗಳು ಜಂಟಿಯಾಗಿ ನಡೆಸುವ ‘ಸಾಗರ ಕವಚ’ ಎನ್ನುವ ಅಣಕು ಕಾರ್ಯಾಚರಣೆ ಇದು.
 
ಕರಾವಳಿಯಲ್ಲಿ ನಾಕಾಬಂಧಿ:‘ಈ ಅಣಕು ಕಾರ್ಯಾಚರಣೆ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಆರಂಭಗೊಂಡಿದ್ದು, ಶನಿವಾರ ಸಂಜೆ 6 ಗಂಟೆಗೆ ಮುಕ್ತಾಯವಾಗುತ್ತದೆ. ಕರಾವಳಿಯ ಉದ್ದಗಲಕ್ಕೂ ಪೊಲೀಸ್‌ ಭದ್ರತೆ ಹಾಕಲಾಗಿದೆ.
 
ರಾಷ್ಟ್ರೀಯ ಹೆದ್ದಾರಿ­–66ರಲ್ಲಿ ಹಲವೆಡೆ ತಾತ್ಕಾಲಿಕ ನಾಕಾಬಂಧಿಗಳನ್ನು ನಿರ್ಮಿಸಿ, ವಾಹನಗಳ ತಪಾಸಣೆ­ ನಡೆಸಲಾಗುತ್ತಿದೆ. ಕಡಲಿನಲ್ಲಿ ಕೋಸ್ಟ್‌­ಗಾರ್ಡ್‌ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ’ ಎಂದು ಡಿವೈಎಸ್ಪಿ ಕೆ.ಟಿ.ಪ್ರಮೋದರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು. 
 
‘ನಗರದ ಜಿಲ್ಲಾಧಿಕಾರಿ ಕಚೇರಿ, ವಾಣಿಜ್ಯ ಬಂದರು, ಕೈಗಾ ಅಣು ವಿದ್ಯುತ್ ಸ್ಥಾವರ, ಅಣೆಕಟ್ಟುಗಳು, ಮುರ್ಡೇಶ್ವರ, ಗೋಕರ್ಣ,  ಬಂದರುಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ’ ಎಂದರು.
***
ರೆಡ್‌ ಫೋರ್ಸ್‌ನಿಂದ ಬಾಂಬ್‌ ಅಳವಡಿಕೆ
ನೌಕಾ ಸೇನೆ, ಕೋಸ್ಟ್‌ ಗಾರ್ಡ್‌, ಕರಾವಳಿ ಕಾವಲು ಪಡೆ ಹಾಗೂ ಜಿಲ್ಲೆಯ ಸಿವಿಲ್‌ ಪೊಲೀಸರು ಈ ಕಾರ್ಯಾ­ಚರಣೆಯಲ್ಲಿ ಪಾಲ್ಗೊಂಡಿದ್ದು, ರೆಡ್‌ ಫೋರ್ಸ್‌ ಹಾಗೂ ಬ್ಲೂ ಫೋರ್ಸ್‌ ಎಂದು ಎರಡು ಗುಂಪುಗಳನ್ನು ಮಾಡಲಾಗಿ ರುತ್ತದೆ. ನೌಕಾನೆಲೆ ಸಿಬ್ಬಂದಿ (ರೆಡ್‌ ಫೋರ್ಸ್‌) ಮಾರುವೇಷ ದಲ್ಲಿ ಬಂದು ಬಾಂಬ್‌ ಮಾದರಿ ಯನ್ನು ಆಯ್ದ ಸ್ಥಳದಲ್ಲಿ ಇಡಬೇಕು ಹಾಗೂ ಪೊಲೀಸ್‌ ಸಿಬ್ಬಂದಿ (ಬ್ಲೂ ಪೋರ್ಸ್‌) ಅದನ್ನು ಪತ್ತೆ ಹೆಚ್ಚುವ ಕಾರ್ಯ ವನ್ನು ಮಾಡಬೇಕು. ಇದರಲ್ಲಿ ಪೊಲೀಸರು ವಿಫಲರಾದರೆ ಭದ್ರತೆ ಹೆಚ್ಚಿಸುವ ಕುರಿತು ಗಮನ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.