ADVERTISEMENT

ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 5:05 IST
Last Updated 13 ಮಾರ್ಚ್ 2017, 5:05 IST

ಭಟ್ಕಳ: ಭಟ್ಕಳದಲ್ಲಿ ಪರಿಸ್ಥಿತಿಯನ್ನು ಹದಗೆಡಿಸುವವರ ವಿರುದ್ದ ಕಠಿಣಕ್ರಮ ಜರುಗಿಸಬೇಕು ಎಂದು ಇಲ್ಲಿನ ತಂಝೀಮ್ ನಿಯೋಗದ ಸದಸ್ಯರು ಪಶ್ಚಿಮವಲಯ ಪೊಲೀಸ್ ಮಹಾನಿರ್ದೇಶಕ ಹರಿಸೇಖರನ್ ಅವರಿಗೆ ಶನಿವಾರ ರಾತ್ರಿ ಮನವಿ ನೀಡಿ ಆಗ್ರಹಿಸಿದರು.

ಕಾರ್ಯನಿಮಿತ್ತ ಭಟ್ಕಳಕ್ಕೆ ಆಗಮಿಸಿದ್ದ ಅವರನ್ನು ನಿಯೋಗದ ಸದಸ್ಯರು ತಂಝೀಮ್ ಉಪಾಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ನೇತೃತ್ವದಲ್ಲಿ ಅವರನ್ನು ಭೇಟಿ ಮಾಡಿ ಭಟ್ಕಳದಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿದರು.

ಕೆಲವು ತಿಂಗಳ ಹಿಂದೆ ಭಟ್ಕಳದ ಕೆಲವು ನಾಗಬನಗಳಲ್ಲಿ ಮಾಂಸ ಹಾಗೂ ಮೂಳೆಯನ್ನು ಎಸೆದು ಕೆಲವು ಸಮಾಜಘಾತುಕರು ಶಾಂತಿಗೆ ಭಂಗ ತರಲು ಯತ್ನಿಸಿದರು. ಅಲ್ಲದೇ ಇಲ್ಲಿನ ಪ್ರತಿಯೊಂದು ಘಟನೆಯನ್ನು ಮುಸ್ಲಿಮರ ತಲೆಗೆ ಕಟ್ಟುವ ಮೂಲಕ ರಾಜಕೀಯ ಲಾಭ ಪಡೆಯಲು ಹವಣಿಸಲಾಗುತ್ತಿದೆ.

ADVERTISEMENT

ಈ ಘಟನೆಗೆ ಸಂಬಂಧಿಸಿದಂತೆ ಹಿಂದೆ ಪಿಎಸ್ಐ ಆಗಿದ್ದ ರೇವತಿ ಅವರು ರಾಜ್ಯದ ಗೃಹಸಚಿವರು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಸರ್ಕಾರ ಮತ್ತು ಪೊಲೀಸ್ ಇಲಾಖೆ ಅದನ್ನು ಗಂಭೀರವಾಗಿ ಪರಿ ಗಣಿಸಲೇ ಇಲ್ಲ. ಇಂಥಹವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಇನಾಯತ್ ಉಲ್ಲಾ ಶಾಬಂದ್ರಿ ಆಗ್ರಹಿಸಿದರು. ತಂಝೀಮ್ ಸಂಸ್ಥೆ ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾ ಡುವಲ್ಲಿ ಸಕ್ರಿಯವಾಗಿದೆ ಎಂದು ಹೇಳಿದರು.

ನಿಯೋಗದ ಅಹವಾಲು ಆಲಿಸಿದ ಐಜಿಪಿ ಹರಿಶೇಖರನ್, ಭಟ್ಕಳದಲ್ಲಿ ಶಾಂತಿಭಂಗ ಉಂಟು ಮಾಡುವವರ ವಿರುದ್ಧ ಕಠಿಣ ನಿಲುವು ಹೊಂದುವಂತೆ ಎಸ್ಪಿ, ಡಿವೈಎಸ್ಪಿಯವರಿಗೆ ನಿರ್ದೇಶನ ನೀಡಲಾಗಿದ್ದು, ಇಂಥಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿ ಸುವಂತೆಯೂ ಸೂಚಿಸಲಾಗಿದೆ ಎಂದರು.  ಅಲ್ಲದೇ ಭಟ್ಕಳದಲ್ಲಿನ ಎಲ್ಲಾ ಮಂದಿರ, ಮಸೀದಿ,ಚರ್ಚ್‌ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸು ವಂತೆಯೂ  ಒತ್ತಾಯಿಸಿದ ಅವರು, ಇದರಿಂದ ಅಪರಾಧ ಎಸಗುವ ಅವಕಾಶ ತಪ್ಪುವುದಲ್ಲದೇ, ಆರೋಪಿಗಳ ಪತ್ತೆಗೂ ಸಹಕಾರಿಯಾಗುತ್ತದೆ ಎಂದರು.

ತಂಝೀಮ್ ನಿಯೋಗದ ಎಸ್. ಜೆ ಸೈಯದ್ ಹಾಷಿಮ್, ಅಬ್ದುಲ್ಲಾ ದಾಮುದಿ, ಸೈಯದ್ ಇಮ್ರಾನ್ ಲಂಕಾ, ಸಿದ್ದೀಖ್ ಡಿ. ಎಫ್, ಮೀರಾ ಸಿದ್ದೀಖ್  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.