ADVERTISEMENT

ಶಾಸಕರ ಲಿಖಿತ ಭರವಸೆ: ಪ್ರತಿಭಟನೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:53 IST
Last Updated 19 ಏಪ್ರಿಲ್ 2017, 5:53 IST

ಅಂಕೋಲಾ:  ತಾಲ್ಲೂಕಿನ ಬೆಳಂಬಾರ ರಸ್ತೆ ದುರಸ್ತಿ ಮಾಡುವ ಕುರಿತು ಶಾಸಕ ಸತೀಶ ಸೈಲ್‌ ಲಿಖಿತ ಭರವಸೆ ನೀಡಿದ ಕಾರಣ ಬುಧವಾರ ನಡೆಯಬೇಕಿದ್ದ ರಸ್ತೆತಡೆ, ಪ್ರತಿಭಟನೆಯನ್ನು ಸದ್ಯಕ್ಕೆ ಕೈಬಿಟ್ಟು ಮುಂದಕ್ಕೆ ಹಾಕಿದರು.ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹೊಂಡದಿಂದ ಕೂಡಿದ್ದು, ಶಾಸಕರು ಈ ಬಗ್ಗೆ  ಕೂಡಲೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಇದೇ 19ರಂದು  ಸ್ಥಳೀಯ ಪಂಚಾಯ್ತಿ ವತಿ­ಯಿಂದ ಬಾಸಗೋಡದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಪಂಚಾಯ್ತಿಗೆ ಬಂದ ಶಾಸಕ ಸತೀಶ ಸೈಲ್‌ ಸದಸ್ಯ ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿದರು.

ಈಗಾಗಲೇ ಈ ರಸ್ತೆ ನಿರ್ಮಾಣಕ್ಕೆ 8 ಕೋಟಿ ಮಂಜೂರು ಮಾಡುವ ಹಂತ­ದಲ್ಲಿದ್ದು ಈ ರಸ್ತೆಗೆ ಒಂದು ಸೇತುವೆ ಇರುವುದರಿಂದ ಟೆಂಡರ್ ಪ್ರಕ್ರಿಯೆ ವಿಳಂಬ­ವಾಗಿದೆ. ಇದು ಕಾಂಕ್ರೀಟ್ ರಸ್ತೆಯಾಗಿದ್ದು, ಜುಲೈ ತಿಂಗಳ ಅಂತ್ಯದ ವೇಳೆಗೆ ಕಾಮಗಾರಿ ಆರಂಭಿಸುತ್ತೇನೆ. ಮಳೆಗಾಲ ಮುಗಿದ ನಂತರ ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗು­ವುದು. ಸ್ಥಳೀಯ ಪಂಚಾಯ್ತಿ ಪ್ರತಿನಿಧಿ­ಗಳು, ಸಿಬ್ಬಂದಿ, ಗ್ರಾಮಸ್ಥರು ಈಗಿರುವ ರಸ್ತೆ 7 ಮೀ. ವಿಸ್ತರಣೆ ಮಾಡಿಕೊಡ­ಬೇಕು ಎಂದು ಶಾಸಕರು ಭರವಸೆ ನೀಡಿ­ದರು. ಆದರೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ನಂತರ ಶಾಸಕರು ಈ ಬಗ್ಗೆ ಲಿಖಿತವಾಗಿ ಬರೆದುಕೊಟ್ಟರು.

ಸಭೆಯಲ್ಲಿ ಹಾಜರಿದ್ದ ಗ್ರಾಮ ಪಂಚಾಯ್ತಿ ಸದಸ್ಯರಾದ ಮಾದೇವ ಗೌಡ, ಉಲ್ಲಾಸ ಶೇಣ್ವಿ, ಮಂಜುನಾಥ ನಾಯ್ಕ, ಜಗದೀಶ ಖಾರ್ವಿ ಇತರರು ರಸ್ತೆ ಸಮಸ್ಯೆ ಕುರಿತು ವಿವರಿಸಿದರು. ‘ಒಟ್ಟು 4.74 ಕಿ.ಮೀ. ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೆ   ಮುಂದಿನ ಚುನಾವಣೆಗೆ ಸ್ಪರ್ಧಿಸಲಾರೆ’ ಎಂದು ಶಾಸಕರು ಹೇಳಿದರು.

ADVERTISEMENT

ತಾಲ್ಲೂಕು ಪಂಚಾ­ಯ್ತಿ ಅಧ್ಯಕ್ಷೆ ಸುಜಾತಾ ಗಾಂವ­ಕರ,  ಸದಸ್ಯರಾದ ಶಾಂತಿ ಆಗೇರ, ಬೀರಾ ಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ವಿನೋದ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಮಾಜಿ ಶಾಸಕ ಕೆ.ಎಚ್. ಗೌಡ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್.ಜಿ. ಭಟ್, ಪಿ.ಡಿ.ಓ. ಹಸ್ಮಿತ್ ಖಾನ್, ಶಾಸಕ ಆಪ್ತ ಕಾರ್ಯ­ದರ್ಶಿ ಗಣಪತಿ ಗುನಗಾ  ಇತರರು ಪಾಲ್ಗೊಂಡಿದ್ದರು.
‘ಜುಲೈ ಅಂತ್ಯದೊಳಗೆ ರಸ್ತೆ ಕಾಮ­ಗಾರಿ ಪ್ರಾರಂಭಿಸುವುದಾಗಿ ಶಾಸ­ಕರು ಲಿಖಿತ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ  ಇದೇ19ರಂದು ನಡೆಯ­ಬೇಕಿದ್ದ ರಸ್ತೆ ತಡೆ ಪ್ರತಿಭಟನೆ ಮುಂದಕ್ಕೆ ಹಾಕಲಾಗಿದೆ’ ಎಂದು ಬೆಳಂಬಾರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬೇಬಿ ಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.