ADVERTISEMENT

ಶಿರಸಿಯಲ್ಲಿ ಕಾಂಗ್ರೆಸ್ ಸಮಾವೇಶ ನಾಳೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 8:34 IST
Last Updated 8 ಜುಲೈ 2017, 8:34 IST

ಶಿರಸಿ: ಪಕ್ಷ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಶಿರಸಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಬೂತ್, ವಾರ್ಡ್, ಘಟಕ ಸಮಿತಿಯ ಸದಸ್ಯರ ಸಭೆಯನ್ನು ಇದೇ 9ರ ಬೆಳಿಗ್ಗೆ 10 ಗಂಟೆಗೆ ಇಲ್ಲಿನ ತೋಟಗಾರರ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಿಲ್ಲೆಯಲ್ಲಿ ಎರಡನೇ ಸುತ್ತಿನ ಪ್ರವಾಸ ಮಾಡಲಿರುವ ಎಐಸಿಸಿಯ ಕರ್ನಾಟಕದ ಉಸ್ತುವಾರಿ ಕಾರ್ಯದರ್ಶಿ ಮಾಣಿಕಂ ಠಾಕೂರ್ ಈ ಸಭೆಯಲ್ಲಿ ಭಾಗವಹಿಸುವರು. ಶಿರಸಿ ತಾಲ್ಲೂಕಿನ 22 ಗ್ರಾಮ ಪಂಚಾಯ್ತಿಗಳ 142 ಬೂತ್‌, ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶ ಪಾಂಡೆ, ಕೆಪಿಸಿಸಿ ಪ್ರಮುಖರಾದ ವಿ. ಮುನಿಯಪ್ಪ, ಮಂಜುನಾಥ ಕುನ್ನೂರ, ಶ್ಯಾಮಲಾ ಭಂಡಾರಿ ಉಪಸ್ಥಿತರಿರುವರು’ ಎಂದರು.
‘ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಕಾಂಗ್ರೆಸ್‌ ಪಕ್ಷ ಈ ಹಿಂದೆ ಕಾಂಗ್ರೆಸ್‌ ನಡೆ ಹಳ್ಳಿಯೆಡೆಗೆ ಕಾರ್ಯಕ್ರಮ ರೂಪಿಸಿತ್ತು. ಈ ಕಾರ್ಯಕ್ರಮ ನಂತರದ ದಿನಗಳಲ್ಲಿ ಇಡೀ ರಾಜ್ಯದಲ್ಲಿ ನಡೆಯಿತು. ಜಿಲ್ಲೆಯಲ್ಲಿ ಪಕ್ಷವನ್ನು ಬಲಗೊಳಿಸುವ ದಿಸೆಯಲ್ಲಿ ಇಂತಹ ಹಲವಾರು ಕಾರ್ಯಕ್ರಮ ರೂಪಿಸಲಾಗುತ್ತಿದೆ.

ADVERTISEMENT

ಇವುಗಳಲ್ಲಿ ಈ ಸಭೆ ಸಹ ಒಂದಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ಕೂಡ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು. ಬಿಜೆಪಿ ಪ್ರಮುಖ ವೆಂಕಯ್ಯ ನಾಯ್ಡು ‘ಸಾಲ ಮನ್ನಾ ಫ್ಯಾಷನ್ ಆಗಿದೆ’ ಎಂದಿದ್ದಾರೆ. ಸ್ವತಃ ರೈತರಾಗಿದ್ದರೆ, ರೈತರ ಸಂಕಷ್ಟದ ಅರಿವಿದ್ದರೆ ಅವರ ಬಾಯಲ್ಲಿ ಇಂತಹ ಮಾತುಗಳು ಬರುತ್ತಿರಲಿಲ್ಲ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಹಳಿಯಾಳ ಕ್ಷೇತ್ರಕ್ಕೆ ಮಾತ್ರ ಸೀಮಿತ ರಾಗುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿ ಸಿದ ಅವರು ‘ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರೇ ಇರುವುದರಿಂದ ಅವರು ಆಯಾ ಕ್ಷೇತ್ರ ಜವಾಬ್ದಾರಿ ನೋಡಿ ಕೊಳ್ಳುತ್ತಾರೆ. ಅದಕ್ಕಾಗಿ ಎಲ್ಲದಕ್ಕೂ ಸಚಿವರೇ ಬೇಕಾಗುವುದಿಲ್ಲ’ ಎಂದರು. ಪಕ್ಷದ ಪ್ರಮುಖರಾದ ರಮೇಶ ದುಬಾಶಿ, ಅಬ್ಬಾಸ್ ತೋನ್ಸೆ, ಎಸ್‌.ಕೆ. ಭಾಗವತ, ಸುಮಾ ಉಗ್ರಾಣಕರ, ಜ್ಯೋತಿ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.