ADVERTISEMENT

ಶಿರಸಿ ವಿಭಾಗಕ್ಕೆ ₹ 2.64 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 6:50 IST
Last Updated 26 ಜುಲೈ 2017, 6:50 IST

ಶಿರಸಿ: ವಾರದ ಹಿಂದೆ ಚುರುಕುಗೊಂಡಿದ್ದ ಮುಂಗಾರು ಮಳೆ ಹಳ್ಳ–ಕೊಳ್ಳಗಳನ್ನು ತುಂಬಿಸಿ ರೈತರಲ್ಲಿ ಖುಷಿ ಮೂಡಿಸಿದೆ. ಆದರೆ ಮಳೆಯ ಜೊತೆ ಬೀಸಿದ ಗಾಳಿ ಹೆಸ್ಕಾಂ ವಿಭಾಗಕ್ಕೆ ₹ 2.64 ಕೋಟಿ ನಷ್ಟವುಂಟುಮಾಡಿದೆ.

ಶಿರಸಿ ಹೆಸ್ಕಾಂ ವಿಭಾಗದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳಲ್ಲಿ ಸುರಿದ ಮಳೆ, ಗಾಳಿ, ಸಿಡಿಲಿಗೆ ಅಬ್ಬರಕ್ಕೆ 1947 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 225 ವಿದ್ಯುತ್ ಪರಿವರ್ತಕಗಳು (ಟಿ.ಸಿ) ಹಾಳಾಗಿವೆ.

ಶಿರಸಿ ತಾಲ್ಲೂಕಿನಲ್ಲಿ 91 ಟಿ.ಸಿ ಹಾಳಾಗಿದ್ದು 374 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಸಿದ್ದಾಪುರ ತಾಲ್ಲೂಕಿನಲ್ಲಿ 46 ಟಿ.ಸಿ, 386 ಕಂಬಗಳು, ಯಲ್ಲಾಪುರ ತಾಲ್ಲೂಕಿನಲ್ಲಿ 26 ಟಿ.ಸಿ, 893 ಕಂಬಗಳು, ಮುಂಡಗೋಡ ತಾಲ್ಲೂಕಿನಲ್ಲಿ 62 ಟಿ.ಸಿ, 294 ಕಂಬಗಳು ಮುರಿದು ಬಿದ್ದಿವೆ.

ADVERTISEMENT

‘ಮುಂಗಾರು ಆರಂಭವಾಗುವ ಪೂರ್ವದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಹೆಸ್ಕಾಂ ಕೇಂದ್ರ ಕಚೇರಿ ಅಧಿಕಾರಿಗಳು ಶಿರಸಿ ವಿಭಾಗಕ್ಕೆ 6000 ಕಂಬಗಳನ್ನು ಪೂರೈಕೆ ಮಾಡಿದ್ದಾರೆ. ಮಳೆಗಾಲದಲ್ಲಿ ಆಗಿರುವ ನಷ್ಟದ ಕುರಿತು ಕೇಂದ್ರ ಕಚೇರಿಗೆ ಸಕಾಲಕ್ಕೆ ವರದಿ ಸಲ್ಲಿಸಲಾಗುತ್ತದೆ.

ಇದಕ್ಕೆ ತಕ್ಷಣ ಸ್ಪಂದಿಸುವ ಅಧಿಕಾರಿಗಳು ಅಗತ್ಯ ಸಾಮಗ್ರಿ ಸರಬರಾಜು ಮಾಡುತ್ತಾರೆ. ಕಳೆದ ವರ್ಷ ಶಿರಸಿ ಹೆಸ್ಕಾಂ ವಿಭಾಗದಲ್ಲಿ ಒಟ್ಟು 2551 ಕಂಬಗಳು ಮುರಿದು ಬಿದ್ದಿದ್ದು, 289 ಟಿ.ಸಿ ಹಾಳಾಗಿದ್ದವು. ಒಟ್ಟು ₹ 3.13 ಕೋಟಿ ನಷ್ಟವಾಗಿತ್ತು’ ಎನ್ನುತ್ತಾರೆ ಹೆಸ್ಕಾಂ ಶಿರಸಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ದೀಪಕ ಕಾಮತ್.

ಮುಗ್ಗರಿಸಿದ ಮಳೆ: ತಾಲ್ಲೂಕಿನಲ್ಲಿ ಕಳೆದ 2 ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮೋಡ ಕವಿದ ವಾತಾವರಣ. ತುಸು ಹೊತ್ತು ಮೂಡುವ ಬಿಸಿಲಿನ ನಡುವೆ ಸಣ್ಣ ಮಳೆಯಾಗುತ್ತಿದೆ. ಈ ಬಾರಿಯ ಮುಂಗಾರಿನಲ್ಲಿ ಜು.20ರಂದು ಅತ್ಯಧಿಕ 135 ಮಿ.ಮೀ ಮಳೆಯಾಗಿತ್ತು. ಜು.21ರಂದು 87 ಮಿ.ಮೀ, ಜು.22ರಂದು 24 ಮಿ.ಮೀ, 23ರಂದು 18 ಮಿ.ಮೀ, 24ರಂದು 12 ಮಿ.ಮೀ ಹಾಗೂ 25ರಂದು 24 ಮಿ.ಮೀ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.