ADVERTISEMENT

ಶೌಚಾಲಯ ನಿರ್ಮಾಣ; ಶೇ 96 ಪ್ರಗತಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 5:17 IST
Last Updated 10 ಸೆಪ್ಟೆಂಬರ್ 2017, 5:17 IST

ಶಿರಸಿ: ಉತ್ತರ ಕನ್ನಡ ಜಿಲ್ಲೆ ಶೌಚಾಲಯ ಮುಕ್ತ ಜಿಲ್ಲೆಯಾಗುವ ದಿಸೆಯಲ್ಲಿ ದಾಪುಗಾಲಿಟ್ಟಿದೆ. ಶೇ 96.89 ಸಾಧನೆ ಆಗಿದೆ ಎಂದು ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯ ವಿವಿಧ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್‌.ಜಿ. ನಂಜಯ್ಯಮಠ ಹೇಳಿದರು.

ಶನಿವಾರ ಇಲ್ಲಿ ನಡೆದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ವಿವಿಧ ಕಾಮಗಾರಿಗಳ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅಕ್ಟೋಬರ್ 2ರಂದು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಪ್ರಯತ್ನ ನಡೆಸಲಾಗಿದೆ.

ಈ ನಿಟ್ಟಿನಲ್ಲಿ ಗುರಿ ಸಾಧನೆ ಕುರಿತು ಸಭೆ ನಡೆಸಿ ಕಾಮಗಾರಿಗೆ ಇನ್ನಷ್ಟು ವೇಗ ನೀಡಲಾಗುತ್ತಿದೆ. ಶಿರಸಿಯಲ್ಲಿ ಶೇ 96.50ರಷ್ಟು ಪ್ರಗತಿ ಸಾಧ್ಯವಾಗಿದ್ದು, ಶೇ 3.5 ಬಾಕಿಯಿದೆ. ಸಾರ್ವಜನಿಕರ ಅಸಹಕಾರ, ಮಳೆ ನಡುವೆ ಕಾಮಗಾರಿ ಆಗದಿರುವುದು ಇದಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಉತ್ತಮ ಸಾಧನೆ ಆಗಿದೆ ಎಂದರು.  

ADVERTISEMENT

ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಕುರಿತು ಮಾತನಾಡಿದ ಅವರು, ‘ಪ್ಯಾನ್ ಏಷ್ಯಾ ವತಿಯಿಂದ ನೀಡಿದ್ದ ಗುತ್ತಿಗೆ ವಾಪಸ್‌ ಪಡೆದು ಬಾಕಿ ಉಳಿದಿರುವ ಕಾಮಗಾರಿಗಳಿಗೆ ಮರು ಟೆಂಡರ್ ಕರೆಯಲಾಗುತ್ತಿದೆ’ ಎಂದರು.

ಬನವಾಸಿಯಲ್ಲಿ ಬಹುಗ್ರಾಮ ನೀರಿನ ಯೋಜನೆ ಮೂರು ತಿಂಗಳಿನಿಂದ ಸರಿಯಾಗಿ ನಡೆಯುತ್ತಿಲ್ಲ. ವರದಾ ನದಿಯಲ್ಲಿ ನೀರಿನ ಕೊರತೆ ಇರುವ ಕಾರಣ ಹೀಗಾಗುತ್ತಿದೆ. ಬದನಗೋಡದಲ್ಲಿ ನಿರ್ಮಿಸಿರುವ ಶಾಶ್ವತ ನೀರಾವರಿ ಯೋಜನೆಯಡಿ ಕೆಲವು ಗ್ರಾಮಗಳಿಗೆ ಮಾತ್ರ ನೀರು ಪೂರೈಕೆ ಆಗುತ್ತಿದೆ ಎಂದು ಅಧಿಕಾರಿ ರಾಮಚಂದ್ರ ಗಾಂವಕರ ಹೇಳಿದರು. ಕುಡಿಯುವ ನೀರಿಗೆ ಸಂಬಂಧಿಸಿ ತಾಲ್ಲೂಕಿಗೆ ₹ 5 ಕೋಟಿ ಅಗತ್ಯವಿದೆ ಎಂದು ತಿಳಿಸಿದರು.

ಸರ್ಕಾರಕ್ಕೆ ಅನಿವಾರ್ಯ: ಮಂಗಳೂರಿನಲ್ಲಿ ಆಗಬಹುದಾಗಿದ್ದ ಗಲಭೆ ತಡೆಯುವುದು ಸರ್ಕಾರದ ಕರ್ತವ್ಯವಾಗಿತ್ತು. ಹಾಗಾಗಿ ಪಕ್ಷದ ಒಳಿತು- ಕೆಡುಕಿಗಿಂತ ಜನರ ಹಿತ ಕಾಯುವುದು ಮುಖ್ಯ ಎಂದು ಪರಿಗಣಿಸಿ ಮಂಗಳೂರು ಚಲೋಕ್ಕೆ ಕಾಂಗ್ರೆಸ್ ತಡೆಯೊಡ್ಡಿತ್ತು ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಲಿಂಗಾಯಿತ ಪ್ರತ್ಯೇಕ ಧರ್ಮದ ಕುರಿತು ಪ್ರತಿಕ್ರಿಯಿಸಿದ ಅವರು, ‘ವೀರಶೈವ ಮಹಾಸಭಾದವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು. ಎಲ್ಲರೂ ಕೂಡಿ ಹೋಗುವುದು ಉತ್ತಮ.  ಮುಖ್ಯಮಂತ್ರಿ ಲೋಕಾರೂಢಿಯಾಗಿ ಮಾತನಾಡಿದ್ದನ್ನೇ ಇಟ್ಟುಕೊಂಡು ಮುಖ್ಯಮಂತ್ರಿಯೇ ಕುತಂತ್ರ ಮಾಡಿದ್ದಾರೆ ಎಂದು ಕೆಲವರು ಆರೋಪಿಸುತ್ತಿರುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.